
ಉಳ್ಳಾಲ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೈದ ಉಡುಪಿಯ ಶಾಂಭವಿ ಲಾಡ್ಜ್ ನಲ್ಲೇ ಕೊಣಾಜೆ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಮದಕ ನಿವಾಸಿ ಚರಣ್ರಾಜ್(30) ಆತ್ಮಹತ್ಯೆ ನಡೆಸಿರುವ ಘಟನೆ ಇಂದು ಬೆಳಕಿಗೆ ಬಂದಿದ್ದು, ಪ್ರಕರಣದ ಹಿಂದೆ ಸಂಬಂಧಿ ಯುವತಿಯ ಪ್ರೀತಿಯೇ ಕಾರಣವಾಗಿರುವ ಅಂಶ ಸಾಯುವ ಮುನ್ನ ಆತ ನಡೆಸಿದ ವೀಡಿಯೋ ಮೂಲಕ ತಿಳಿಸಿರುವುದಾಗಿ ತಿಳಿದುಬಂದಿದೆ.
ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದ ಚರಣ್ ರಾಜ್ ಮೃತದೇಹ ಇಂದು ಉಡುಪಿಯ ಲಾಡ್ಜ್ ನಲ್ಲಿ ಆತ್ಮಹತ್ಯೆ ನಡೆಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉತ್ತಮ ಕ್ರಿಕೆಟ್ ಆಟಗಾರನಾಗಿದ್ದ ಚರಣ್ ರಾಜ್ ಭಾನುವಾರ ಅಂಬ್ಲಮೊಗರುವಿನಲ್ಲಿ ನಡೆದಿದ್ದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡು ಬಳಿಕ ಮನೆಗೆ ವಾಪಸ್ಸಾಗಿದ್ದರು.

ಮುಳುವಾದ ಪ್ರೀತಿ :
ಚರಣ್ ರಾಜ್ ಮಾಡೂರು ನಿವಾಸಿ ಸಂಬಂಧಿ ಯುವತಿಯನ್ನು ಪ್ರೀತಿಸುತ್ತಿದ್ದರು. ಇದು ಆಕೆಯ ಮನೆಮಂದಿಗೆ ತಿಳಿದುಬಂದಿದ್ದು, ಅದರಂತೆ ಯುವತಿಯ ಸಹೋದರ ಭಾನುವಾರ ತಡರಾತ್ರಿ ಚರಣ್ ರಾಜ್ ನನ್ನು ಮನೆಗೆಂದು ಕರೆದುಕೊಂಡು ಹೋಗಿದ್ದನು. ಆದರೆ ಯುವತಿ ಮನೆಯವರು ಚರಣ್ ರಾಜ್ ಅವರಿಗೆ ಹಲ್ಲೆ ನಡೆಸಿ ಯುವತಿಯನ್ನು ಬಿಟ್ಟುಬಿಡುವಂತೆ ಎಚ್ಚರಿಕೆಯನ್ನು ನೀಡಿದ್ದರೆನ್ನಲಾಗಿದೆ. ಅಲ್ಲದೇ ಆತನ ಬಳಿಯಿದ್ದ ಎರಡು ಮೊಬೈಲ್ ಸೆಟ್ ಗಳನ್ನು ತಮ್ಮ ಬಳಿ ಇರಿಸಿದ್ದರು. ಇದರಿಂದ ಮಾನಸಿಕವಾಗಿ ನೊಂದ ಚರಣ್ ಅಂದು ಮನೆಯಲ್ಲಿದ್ದ ತಂದೆಯ ಹಳೇಯ ಬ್ಲ್ಯಾಕ್ ಆಂಡ್ ವೈಟ್ ಸೆಟ್ ಫೋನಿನೊಂದಿಗೆ ಮನೆ ಬಿಟ್ಟಿದ್ದ ಎಂದು ತಿಳಿದುಬಂದಿದೆ.
ಉಡುಪಿಗೆ ತೆರಳಿ ಅಲ್ಲಿ ಹೊಸ ಮೊಬೈಲನ್ನು ಖರೀದಿಸಿ ಅದಕ್ಕೆ ತನ್ನ ತಂದೆಯ ಮೊಬೈಲಿನಲ್ಲಿದ್ದ ಸಿಮ್ ಕಾರ್ಡನ್ನು ಹಾಕಿ, ಅದೇ ಮೊಬೈಲಿನಲ್ಲಿ ತನಗಾದ ಅನ್ಯಾಯವನ್ನು ತಿಳಿಸಿದ್ದಾರೆ. ಜೊತೆಗೆ ಇತ್ತೀಚೆಗೆ ತನ್ನ ತಂಗಿಯ ನಿಶ್ಚಿತಾರ್ಥ ಕೂಡಾ ನಡೆದಿದ್ದು, ಆಕೆಯ ಮದುವೆ ಸಮಾರಂಭಕ್ಕೆಂದು ಅಲ್ಲಲ್ಲಿ ಕೂಡಿಟ್ಟ ಹಣದ ವಿವರವನ್ನು ರೂ.3 ಲಕ್ಷದಷ್ಟು ಹಣದ ಮಾಹಿತಿಯನ್ನು ಕೂಡಾ ಚರಣ್ ರಾಜ್ ವೀಡಿಯೋದಲ್ಲಿ ತಿಳಿಸಿದ್ದಾರೆ.

ಹೋಮ ನಡೆಸಿದ್ದ ಲಾಡ್ಜ್ ಮಾಲೀಕರು !
ಸಂತೋಷ್ ಆತ್ಮಹತ್ಯೆ ಬಳಿಕ ಶಾಂಭವಿ ಲಾಡ್ಜ್ ನತ್ತ ಎಲ್ಲರ ಚಿತ್ತವಿದ್ದುದರಿಂದ, ಕೆಲ ದಿನಗಳ ಕಾಲ ಲಾಡ್ಜನ್ನೇ ಮುಚ್ಚಿದ್ದ ಮಾಲೀಕರು ಎರಡು ದಿನಗಳ ಹಿಂದಷ್ಟೇ ರೂ. 50,000 ಖರ್ಚು ಮಾಡಿ ಹೋಮ ನಡೆಸಿದ್ದರು. ಬಳಿಕ ತೆರವಾದ ಲಾಡ್ಜ್ ಗೆ ಮೊದಲ ಗ್ರಾಹಕ ಚರಣ್ ರಾಜೇ ಆಗಿದ್ದರು. ಎರಡನೇ ಮಹಡಿಯಲ್ಲಿ ಕೊಠಡಿ ಪಡೆದುಕೊಂಡಿದ್ದ ಚರಣ್ ಅಲ್ಲೇ ಆತ್ಮಹತ್ಯೆ ನಡೆಸಿಕೊಂಡಿರುವುದು ವಿಪರ್ಯಾಸ.








