
ವಿಟ್ಲ: ಕಳವುಗೈದು ಮಾರಾಟ ಮಾಡಿದ ವಸ್ತುಗಳನ್ನು ಕೊಂಡೊಯ್ಯಲು ಆರೋಪಿಯೊಂದಿಗೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಠಾಣಾ ಎಸ್.ಐ.ನೇತೃತ್ವದ ಪೊಲೀಸರು ವಿಟ್ಲದ ಮೇಗಿನಪೇಟೆಯಲ್ಲಿರುವ ಗುಜರಿ ಅಂಗಡಿಯೊಂದಕ್ಕೆ ದಾಳಿ ಮಾಡಿದ ಘಟನೆ ಮೇ.5 ರಂದು ನಡೆದಿದ್ದು, ಬಳಿಕದ ಬೆಳವಣಿಗೆಯಲ್ಲಿ ಅಂಗಡಿಯಲ್ಲಿದ್ದ ವ್ಯಕ್ತಿ ಈಗ ಬರುವುದಾಗಿ ಹೇಳಿ ಪರಾರಿಯಾಗಿರುವುದಾಗಿ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ.
ಬದಿಯಡ್ಕ ಠಾಣಾ ವ್ಯಾಪ್ತಿಯ ಪೆರ್ಲದಲ್ಲಿ ನಡೆದ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬದಿಯಡ್ಕ ಠಾಣಾ ಪೊಲೀಸರು ಮೇ 4 ರಂದು ಬಂಧಿಸಿದರು. ಆತ ನೀಡಿದ ಮಾಹಿತಿಯಂತೆ ಬದಿಯಡ್ಕ ಠಾಣಾ ಪೊಲೀಸರು ಆರೋಪಿ ಮಾರಾಟ ಮಾಡಿದ ಸಾಮಾಗ್ರಿಯನ್ನು ವಶಪಡಿಸಲು ವಿಟ್ಲದ ಗುಜರಿ ಅಂಗಡಿಗೆ ಬಂದಿದ್ದರು.
ಈ ವೇಳೆ ಅಂಗಡಿಯಲ್ಲಿದ್ದ ವ್ಯಕ್ತಿಯೋರ್ವರು ಈಗ ತಂದುಕೊಡುವುದಾಗಿ ಹೇಳಿ ತೆರಳಿದವರು ಮರಳಿ ಬಾರದೆ ನಾಪತ್ತೆಯಾಗಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬದಿಯಡ್ಕ ಠಾಣಾ ಪೊಲೀಸರು ಆ ವ್ಯಕ್ತಿಗಾಗಿ ಆತನ ಅಂಗಡಿಯಲ್ಲಿ ಆತನ ಬರುವಿಕೆಗಾಗಿ ಕಾದು ಕುಳಿತಿದ್ದರು. ಇದರಿಂದಾಗಿ ಅಲ್ಪ ಹೊತ್ತು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.










