ದಕ್ಷಿಣ ಕನ್ನಡ ಜಿಲ್ಲೆಯ ಕುಲಾಲ ಸಮಾಜದ ಶೇ. 95ರಷ್ಟು ಮತದಾರರು ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಿದ್ಧಾಂತವನ್ನು ಒಪ್ಪಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವಾಗ ನಮ್ಮ ಸಮಾಜದ ಯುವನಾಯಕ ಲೋಹಿತ್ ಪಣೋಲಿಬೈಲ್ ಅವರನ್ನು ಪಕ್ಷದಿಂದ ಅಮಾನತು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ವಿಚಾರ ಕುಲಾಲ ಸಮಾಜಕ್ಕೆ ಅತೀವ ನೋವುಂಟಾಗಿದೆ.

ವಿಶ್ವ ಹಿಂದೂ ಪರಿಷತ್ತಿನ ವಿಟ್ಲ ಪ್ರಖಂಡದ ಉಪಾಧ್ಯಕ್ಷರಾಗಿರುವ ಲೋಹಿತ್ ಪಣೋಲಿಬೈಲು ಇವರು ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಹೊಂದಿರದೆ ಹಿಂದೂ ಸಂಘಟನೆಯಲ್ಲಿ ಜವಾಬ್ದಾರಿಯನ್ನು ಹೊಂದಿದ್ದು ಪಕ್ಷದಿಂದ ಉಚ್ಚಾಟನೆ ಮಾಡುವ ಸಂಪ್ರದಾಯವಿಲ್ಲ ಎಂಬುದು ನಮ್ಮ ಪ್ರಾಮಾಣಿಕ ನಂಬಿಕೆ.

ಆದರೆ, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಸಮಿತಿ ಯಾವುದೇ ಕಾರಣ ನೀಡದೆ, ನೋಟೀಸ್ ನೀಡದೆ ಅಥವಾ ವಿಚಾರಣೆಯನ್ನೂ ಮಾಡದೆ ಹಿಂದೂ ಸಂಘಟನೆಯಲ್ಲಿ ಪ್ರಬಲವಾಗಿ ಗುರುತಿಸಿ ಕೊಂಡಿರುವ ಕುಲಾಲ ಸಮುದಾಯದ ಯುವ ನಾಯಕನನ್ನು ಪಕ್ಷ ವಿರೋಧಿ ಎಂಬ ಹಣೆಪಟ್ಟಿಯೊಂದಿಗೆ ಪಕ್ಷದಿಂದ ಉಚ್ಚಾಟನೆ ಮಾಡಿರುವ ನಿರ್ಧಾರದ ಹಿಂದಿನ ಷಡ್ಯಂತ್ರವನ್ನು ಬಹಿರಂಗ ಪಡಿಸುವಂತೆ ಮತ್ತು ಸಾರ್ವಜನಿಕವಾಗಿ ಈ ಬಗ್ಗೆ ಸಮಂಜಸವಾದ ಸ್ಪಷ್ಟನೆ ನೀಡುವಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಿಗೆ ಯುವ ಕುಲಾಲೆರ್ ಬಂಟ್ವಾಳ ಇದರ ವತಿಯಿಂದ ಅಧಿಕೃತ ಪತ್ರ ಮೂಲಕ ಮನವಿ ಸಲ್ಲಿಸಲಾಯಿತು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರು ಈ ಬಗ್ಗೆ ಜಿಲ್ಲಾ ಸಮಿತಿಗೆ ಸ್ಪಷ್ಟ ಮಾಹಿತಿ ನೀಡಿ ಉಚ್ಚಾಟನೆಗೆ ಅಧಿಕೃತ ಕಾರಣವನ್ನು 2 ದಿನದೊಳಗೆ ಲಿಖಿತ ರೂಪದಲ್ಲಿ ನೀಡಬೇಕು. ಇಲ್ಲವಾದರೆ ನಮ್ಮ ಸಮಾಜದ ಸಮಸ್ತರನ್ನು ಸೇರಿಸಿ ಹೋರಾಟದ ಯೋಜನೆಯನ್ನು ಮಾಡಲಾಗುವುದು ಎಂದು ಎಚ್ಚರಿಸಲಾಯಿತು.

ಯುವ ಕುಲಾಲೆರ್ ಬಂಟ್ವಾಳ ಇದರ ಅಧ್ಯಕ್ಷರಾದ ನಿತ್ಯಾನಂದ ಸಿ.ಎ ಇವರ ಮುಂದಾಳತ್ವದಲ್ಲಿ ಬಂಟ್ವಾಳ ತಾಲೂಕು ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಇವರ ಮಾರ್ಗದರ್ಶನದಲ್ಲಿ ಮನವಿ ಸಲ್ಲಿಸಲಾಯಿತು. ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಅವರ ಅನಾರೋಗ್ಯದಿಂದ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಚ್ಚೇಂದ್ರನಾಥ್ ಸಾಲ್ಯಾನ್ ಮತ್ತು ಬಂಟ್ವಾಳ ಕ್ಷೇತ್ರ ಸಮಿತಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡೋಂಬಯ ಇವರು ಕ್ಷೇತ್ರದ ಅಧ್ಯಕ್ಷರ ಪರವಾಗಿ ಬಂಟ್ವಾಳದ ಬಿಜೆಪಿ ಕಚೇರಿಯಲ್ಲಿ ಮನವಿಯನ್ನು ಸ್ವೀಕರಿಸಿದರು.









