




ನವದೆಹಲಿ: 16 ವರ್ಷದ ಹುಡುಗಿಯನ್ನು ಆಕೆಯ ಪ್ರಿಯಕರ ಬರ್ಬರವಾಗಿ ಹತ್ಯೆಗೈದ ಘಟನೆ ದೆಹಲಿಯ ಶಹಾಬಾದ್ ಡೈರಿ ಪ್ರದೇಶದಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಕ್ಷಿ (16) ಕೊಲೆಯಾದ ಹುಡುಗಿ. ಸಾಹಿಲ್ ಮತ್ತು ಸಾಕ್ಷಿ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮಧ್ಯೆ ವೈಮನಸ್ಸು ಉಂಟಾದ ಹಿನ್ನೆಲೆ ಭಾನುವಾರ ಸಂಜೆ ರೋಹಿಣಿಯ ಶಹಬಾದ್ ಡೈರಿ ಪ್ರದೇಶದಲ್ಲಿ ಸಾಹಿಲ್, ಸಾಕ್ಷಿಗೆ 20 ಬಾರಿ ಚಾಕುವಿನಿಂದ ಇರಿದಿದ್ದಾನೆ. ಅಲ್ಲದೇ ಬಂಡೆಯನ್ನು ತಲೆಮೇಲೆ ಎತ್ತಿಹಾಕಿ ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಕ್ಷಿ ತನ್ನ ಸ್ನೇಹಿತೆಯ ಮಗನ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭ ಸಾಹಿಲ್ ಆಕೆಯ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ. ಶಹಬಾದ್ ಡೈರಿಯ ಕಿರಿದಾದ ಲೇನ್‌ನಲ್ಲಿ ಈ ಘಟನೆ ನಡೆದಿದ್ದು, ಈ ಭೀಕರ ದೃಶ್ಯವನ್ನು ದಾರಿಹೋಕರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು.
ಚಾಕುವಿನಿಂದ ಇರಿದು ಬಂಡೆ ಎತ್ತಿ ಹಾಕಿ ಕೊಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪರಾರಿಯಾಗಿರುವ ಆರೋಪಿ ಸಾಹಿಲ್‌ನನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ.