




ಹಾವೇರಿ ಜಿಲ್ಲೆಯ ಯಲಗಚ್ಚ ಗ್ರಾಮದಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಪುನೀತ್‌ರಾಜ್ ಕುಮಾರ್ ಹೆಸರಿನಲ್ಲಿ ನಿರ್ಮಾಣವಾಗಿರುವ ದೇವಸ್ಥಾನವನ್ನು ಅವರ ಧರ್ಮಪತ್ನಿ ಅಶ್ವಿನಿ ಪುನೀತ್‌ರಾಜ್ ಕುಮಾರ್ ಉದ್ಘಾಟಸಿದರು.
ಹಾವೇರಿ ಜಿಲ್ಲೆಯ ಯಲಗಚ್ಚ ಗ್ರಾಮದ ಪ್ರಕಾಶ್ ಎಂಬ ಯುವಕ ಅಪ್ಪು ಮೇಲಿರುವ ತನ್ನ ಅಭಿಮಾನವನ್ನು ಜಗತ್ತಿಗೆ ತೋರಿಸಿದ್ದಾನೆ. ಕಳೆದ ಕೆಲವು ದಿನಗಳಿಂದ ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಗುಡಿಯೊಂದನ್ನು ಕಟ್ಟಿದ್ದಾನೆ.
ಯಲಗಚ್ಚ ಗ್ರಾಮದ ಉಡಚ್ಚಮ್ಮ ದೇವಿಯ ದರ್ಶನ ಪಡೆದ ಅಶ್ವಿನಿಯವರನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ಕುಂಬಮೇಳದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ 6 ಅಡಿ ಎತ್ತರದ ಅಪ್ಪು ಮೂರ್ತಿಯನ್ನು ಲೋಕಾರ್ಪಣೆ ಮಾಡಿದರು.
ಪುನೀತ್ ಅವರ ಅಪ್ಪಟ ಅಭಿಮಾನಿ ಯಲಗಚ್ಚ ಗ್ರಾಮದ ಪ್ರಕಾಶ ಮೊರಬದ ತಮ್ಮ ಮನೆಯ ಸ್ವಂತ ಜಾಗದಲ್ಲಿ ತಮ್ಮ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನದಲ್ಲಿ ಪುನೀತ್ ರಾಜಕುಮಾರ್ ಮೂರ್ತಿ ಅನಾವರಣ ಮಾಡಿದ ಅಶ್ವಿನಿ, ಪ್ರಕಾಶ ಅವರ ಪುತ್ರಿಗೆ ಅಪೇಕ್ಷಾ ಎಂದು ನಾಮಕರಣ ಮಾಡಿದರು. ಅಪ್ಪು ಮೂರ್ತಿಯನ್ನು ನೋಡಿದ ಅಶ್ವಿನಿ ಭಾವುಕರಾದರು.
ಅಭಿಮಾನಿ ಮನೆಯಲ್ಲಿ ಮಾತನಾಡಿದ ಅವರು, ಅದಕ್ಕೇ ಅಭಿಮಾನಿಗಳೇ ದೇವರು ಅನ್ನೋದು, ಇಂತಹ ಅಭಿಮಾನಿ ಸಿಕ್ಕಿರುವುದು ನಮ್ಮ ಪುಣ್ಯ. ಸ್ವಂತ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದು ನಮ್ಮ ಪುಣ್ಯ ಎಂದರು.








