

ಮಂಗಳೂರು: ಪಿಡಬ್ಲ್ಯುಡಿ ಕಂಟ್ರಾಕ್ಟರ್ ಫಾರ್ಮ್ ಹೌಸ್ ಗೆ ನುಗ್ಗಿದ ಒಂಭತ್ತು ಮಂದಿಯ ತಂಡವೊಂದು ದರೋಡೆಗೈದ ಘಟನೆ ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಪಿಡಬ್ಲ್ಯುಡಿ ಕಂಟ್ರಾಕ್ಟರ್ ಪದ್ಮನಾಭ ಕೋಟ್ಯಾನ್ ಎಂಬವರ ಫಾರ್ಮ್ ಹೌಸ್ ಗೆ ನುಗ್ಗಿದ ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದ 8-9 ಮಂದಿಯಿದ್ದ ತಂಡ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ್ದು, ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ತಂಡದ ಸದಸ್ಯರು ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ದರೋಡೆಗೈದಿದೆ.
ಬಳಿಕ ಮನೆಯಲ್ಲಿದ್ದವರನ್ನು ಬೆಡ್ ಶೀಟ್ ಬಳಸಿ ಕೈಕಾಲುಗಳನ್ನು ಕಟ್ಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮನೆಯ ಒಳಗೆಲ್ಲ ತಡಕಾಡಿ ಸಿಕ್ಕಿದ ನಗದು ಹಣ ಮತ್ತು ಒಡವೆಗಳನ್ನು ದೋಚಿದ್ದಾರೆ. ಬಳಿಕ ಮನೆ ಮಾಲೀಕನ ವಾಹನವನ್ನು ಕದ್ದುಕೊಂಡು ತೆರಳಿದ್ದು ಮನೆಯಿಂದ ಅನತಿ ದೂರದಲ್ಲಿ ಬಿಟ್ಟು ಹೋಗಿದ್ದಾರೆ. ಈ ವೇಳೆ ಪದ್ಮನಾಬ್ ಅವರ ಕೈಗೆ ಚೂರಿಯಿಂದ ಇರಿಯಲಾಗಿದೆ
ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಗುರುತು ಪತ್ತೆ ಹಚ್ಚಲು ಮತ್ತು ಅವರನ್ನು ಶೀಘ್ರವಾಗಿ ಬಂಧಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.








