


ಮುಂಬೈ: ಅಮೆರಿಕ-ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆಯೂ ಹಾರ್ಮುಜ್ ಜಲಸಂಧಿಯಿಂದ ಕಚ್ಚಾ ತೈಲ ಹೊತ್ತ ಹಡಗು ಭಾರತಕ್ಕೆ ಆಗಮಿಸಿದೆ. ಹಾರ್ಮುಜ್ ಜಲಸಂಧಿಯಿಂದ ಭಾರತಕ್ಕೆ ಆಗಮಿಸಿದ ಮೊದಲ ತೈಲ ಟ್ಯಾಂಕರ್ ಇದಾಗಿದೆ.
ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಹೊತ್ತ ಲೈಬೀರಿಯನ್ ಧ್ವಜದ ಟ್ಯಾಂಕರ್ ಮುಂಬೈ ಬಂದರಿಗೆ ಆಗಮಿಸಿದೆ. ಹಾರ್ಮುಜ್ ಜಲಸಂಧಿಯಿಂದ ಭಾರತಕ್ಕೆ ಆಗಮಿಸಿದ ಮೊದಲ ತೈಲ ಟ್ಯಾಂಕರ್ ಇದಾಗಿದ್ದು ಬುಧವಾರ ಮಧ್ಯಾಹ್ನ 1 ಗಂಟೆಗೆ ಮುಂಬೈ ಬಂದರನ್ನು ತಲುಪಿದ್ದು ಸಂಜೆ 6:06ಕ್ಕೆ ಹಡಗನ್ನು ನಿಲ್ಲಿಸಲಾಗಿದೆ.
ಲೈಬೀರಿಯಾ ಧ್ವಜದ ಶೆನ್ಲಾಂಗ್ ಸೂಯೆಜ್‌ಮ್ಯಾಕ್ಸ್ ಮಾ.1 ರಂದು ಸೌದಿ ಬಂದರಾದ ರಾಸ್ ತನುರಾದಿಂದ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತದತ್ತ ಹೊರಟಿತ್ತು. ಈ ಸಂದರ್ಭದಲ್ಲಿ ತನ್ನ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪ್ರಬಲ ದಾಳಿ ನಡೆಸಿದ್ದಕ್ಕೆ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿತ್ತು.
ದಿಢೀರ್ ಬಂದ್ ಆಗಿದ್ದರಿಂದ ಹಡಗು ಸಮುದ್ರದಲ್ಲೇ ನಿಂತಿತ್ತು. ಸಮುದ್ರ ದತ್ತಾಂಶ ಸಂಸ್ಥೆಗಳಾದ ಲಾಯ್ಡ್ಸ್ ಲಿಸ್ಟ್ ಇಂಟೆಲಿಜೆನ್ಸ್ ಮತ್ತು ಟ್ಯಾಂಕರ್‌ಟ್ರಾಕರ್ಸ್ ಪ್ರಕಾರ ಮಾ.8 ರಂದು ಜಲಸಂಧಿಯೊಳಗೆ ಹಡಗಿನ ಕೊನೆಯ ಸಿಗ್ನಲ್ ಸ್ಥಳವನ್ನು ತೋರಿಸಿತ್ತು. ಅಪಾಯಕಾರಿಯಾಗಿರುವ ಜಲಸಂಧಿಯೊಳಗೆ ಸಂಚರಿಸುತ್ತಿದ್ದಾಗ ಪತ್ತೆಹಚ್ಚುವುದನ್ನು ತಪ್ಪಿಸಲು ಅದರ ಟ್ರಾನ್ಸ್‌ಪಾಂಡರ್‌ಗಳು ಮತ್ತು ಸ್ವಯಂಚಾಲಿತ ಗುರುತಿನ ವ್ಯವಸ್ಥೆಯನ್ನು ಆಫ್ ಮಾಡುವ ಮೂಲಕ ಅದೃಶ್ಯವಾಗಿತ್ತು. ಈ ವೇಳೆ ಇರಾನ್ ಹಾರ್ಮುಜ್ ಜಲಸಂಧಿ ದಾಟುವ ಚೀನಾ ಹೊರತುಪಡಿಸಿ ಇತರೆ ಹಡಗುಗಳ ಮೇಲೆ ದಾಳಿ ಮಾಡುತ್ತಿತ್ತು ಸಮುದ್ರದಲ್ಲಿ ಸುರಕ್ಷಿತ ಮಾರ್ಗವನ್ನು ತಲುಪಿದ ನಂತರ ಮಾ.9 ರಂದು ಟ್ರ್ಯಾಕಿಂಗ್ ಡೇಟಾಬೇಸ್‌ಗಳಲ್ಲಿ ಮತ್ತೆ ಹಡಗು ಕಾಣಿಸಿಕೊಡಿತು.
1,35,335 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಬಂದ ಶೆನ್‌ಲಾಂಗ್ ಹಡಗಿನಿಂದ ಸರಕುಗಳನ್ನು ತೆಗೆಯುವ ಪ್ರಕ್ರಿಯೆ ಆರಂಭವಾಗಿದ್ದು, ಪೂರ್ವ ಮುಂಬೈನ ಮಹುಲ್ ಸಂಸ್ಕರಣಾಗಾರಗಳಿಗೆ ಬಿಡುಗಡೆ ಮಾಡಲು 36 ಗಂಟೆಗಳು ಬೇಕಾಗುತ್ತದೆ ಎಂದು ಮುಂಬೈ ಬಂದರು ಪ್ರಾಧಿಕಾರ ತಿಳಿಸಿದೆ.
ಅಥೆನ್ಸ್ ಮೂಲದ ಡೈನಕಾಮ್ ಟ್ಯಾಂಕರ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಈ ಹಡಗನ್ನು ನಿರ್ವಹಿಸುತ್ತಿದೆ. ಕ್ಯಾ. ಸುಕ್ಷಾಂತ್ ಸಿಂಗ್ ಸಂಧು ನೇತೃತ್ವದಲ್ಲಿ ಮುಂಬೈಗೆ ಬಂದ ಹಡಗಿನಲ್ಲಿ 29 ಭಾರತೀಯ, ಪಾಕಿಸ್ತಾನಿ ಮತ್ತು ಫಿಲಿಪೈನ್ಸ್ ಸಿಬ್ಬಂದಿ ಇದ್ದಾರೆ ಎನ್ನಲಾಗಿದೆ.
ಯುದ್ಧ ಪ್ರಾರಂಭವಾದಾಗಿನಿಂದ ಇನ್ನೂ 28 ಭಾರತೀಯ ಧ್ವಜವನ್ನು ಹೊಂದಿರುವ ಹಡಗುಗಳು ಜಲಮಾರ್ಗದಲ್ಲಿ ಸಿಲುಕಿಕೊಂಡಿವೆ ಎಂದು ಭಾರತದ ಹಡಗು ನಿರ್ದೇಶನಾಲಯದ ಜನರಲ್ ತಿಳಿಸಿರುವುದಾಗಿ ವರದಿಯಿಂದ ತಿಳಿದುಬಂದಿದೆ.








