Friday, May 3, 2024
spot_imgspot_img
spot_imgspot_img

ಆಟಿ ಅಮಾವಾಸ್ಯೆ : ತುಳುವರ ಚಿಕಿತ್ಸಾ ಪದ್ಧತಿ

- Advertisement -G L Acharya panikkar
- Advertisement -

ತುಳುವರ ಸೌರಮಾನ ಕಾಲಗಣನೆ ಪ್ರಕಾರ ನಾಲ್ಕನೇ ತಿಂಗಳು ಆಟಿ. ಸತ್ತ ಬೆಕ್ಕನ್ನೂ ಹೊರಗೆಸೆಯಲು ಅನುಗೊಡದ ತಾರಾಮಾರಿ ಮಳೆ, ಆನೆ – ಕೋಣಗಳ ಬೆನ್ನು ಬಿರಿಯುವಷ್ಟು ತೀಕ್ಷ್ಣ ಬಿಸಿಲು, ಆಗಾಗ ತಟಮೀರುವ ಹೊಳೆಗಡಲು. ಈ ಪರಿಣಾಮವಾಗಿ ದುಡಿಮೆಗೆ ಎಡೆಯಿಲ್ಲ. ದುಡಿಮೆಯಿಲ್ಲದೆ ತಿನ್ನಲು ಹಿಡಿಗೂಳಿಲ್ಲ. ಅನಿರೀಕ್ಷಿತ ದಾರಿದ್ರ್ಯ. ಜೊತೆಗೆ ಪ್ರಾಕೃತಿಕ ಸ್ಥಿತ್ಯಂತರದಿಂದಾಗಿ ಬಾಧಿಸುವ ಬಗೆಬಗೆಯ ಕಾಯಿಲೆಗಳು. ಹಳೆಯ ಆಟಿದಿನಗಳ ನೆನಪುಗಳಲ್ಲಿ ಇಂತಹದ್ದೇ ಸಾಲುಗಳು. ಹಾಗಾಗಿಯೇ ತುಳುವರಿಗೆ ಆಟಿ ವಿಷಮ ಕಾಲ.

ತಿಂಗಳ ಸಂಕ್ರಮಣ, ಅಮಾವಾಸ್ಯೆ, ಹುಣ್ಣಿಮೆ – ಈ ಮೂರು ತುಳುವರಿಗೆ ಕಾಲಾವರ್ತನ ಪ್ರಕ್ರಿಯೆಗಳು. ಅಮಾವಾಸ್ಯೆ ಎಂಬುದು ಬೆಳಕಿಲ್ಲದ ನೀರವರಾತ್ರಿ. ಅದರಲ್ಲೂ ಸತ್ತವರ ತಿಂಗಳೆಂದು ಪರಿಗಣಿಸಲಾದ ಆಟಿಯಲ್ಲಿ ಬರುವಂತಹ ಅಮಾವಾಸ್ಯೆಗೆ ಇಂತಹ ಕತ್ತಲೆಂಬುದೇ ಇನ್ನಷ್ಟು ಗಾಢವೂ ಗೂಢವೂ ಆಗುತ್ತದೆ . ಕೃತಿಮ ಕಾರ್ಯಗಳ ಫಲಸಿದ್ಧಿ ಅಥವಾ ಪರಿಹಾರಕ್ಕೆ ಅಂದು ಪೂರಕ ವಾತಾವರಣ ಇರುತ್ತದೆ. ಆದ್ದರಿಂದಲೇ ಪಿತೃಕಾರ್ಯ, ಪ್ರೇತ ಮದುವೆ (ಕುಲೆತ್ತಮದಿಮೆ), ಪ್ರೇತ ಆವಾಹನೆ – ಮೋಕ್ಷಾದಿಗಳಿಗೆ ಆಟಿ ಅಮಾವಾಸ್ಯೆ ಹೆಚ್ಚು ಪ್ರಶಸ್ತ ಎಂಬುದು ತುಳುವರ ನಂಬಿಕೆ. ಆಟಿ ಅಮಾವಾಸ್ಯೆಯಂದು ನಸುಕಿನಲ್ಲಿ ತೀರ್ಥ ಕ್ಷೇತ್ರಕ್ಕೆ ತೆರಳಿ ಕಡಲ ಸ್ನಾನ ಮಾಡಿ, ಕುಟುಂಬದಲ್ಲಿ ಮಡಿದವರಿಗೆ ವರ್ಷಂಪ್ರತಿಯ ಪಿತೃ ತರ್ಪಣ ಕೊಡುವವರಿದ್ದಾರೆ. ರಾತ್ರಿ ಮನೆ ಚಾವಡಿಯಲ್ಲಿ ಪರಂಪರೆಯಂತೆ ಗತಿಸಿದವರ ಹೆಸರಿನಲ್ಲಿ ಎಡೆಬಡಿಸಿ ಅವರನ್ನು ಕರೆದು ಉಪಚರಿಸುವವರಿದ್ದಾರೆ. ಸತ್ತವರ ಸದ್ಗತಿಕಾರ್ಯದಂದೇ ರಾತ್ರಿ ಮನೆಯೊಳಕ್ಕೆ ಅವರನ್ನು ಕರೆದು ಸೇರಿಸುವ ತುಳು ಸಂಪ್ರದಾಯ ಪ್ರಕಾರ ಸತ್ಯವ್ಯಕ್ತಿಗಳು ಕುಟುಂಬದಿಂದ ಹೊರಗಲ್ಲ. ಮನೆಯೊಳಗೇ, ಮನೆಮಂದಿಯೊಳಗೇ ಒಬ್ಬರಂತೆ ಇರುತ್ತಾರೆ. ಹಾಗಾಗಿ ಮನೆಯವರ ನಿತ್ಯದ ಅನ್ನಾಹಾರದಲ್ಲೂ ಅವರಿಗೆ ಮೀಸಲಿದೆ. ವಯೋಸಹಜ ವಾಡಿಕೆಯಾದ ಮದುವೆ ಮುಂತಾದವುಗಳನ್ನು ಅವರಿಗೂ ಆಯೋಜಿಸಲಾಗುತ್ತದೆ. ಇವೆಲ್ಲದರಿಂದ ತುಳುವರಿಗಿರುವ ಜೀವಿತ ಮತ್ತು ಮರಣಾನಂತರದ ಸ್ಥಿತಿಗಳ ಸಮನ್ವಯತೆ ವೇದ್ಯವಾಗುತ್ತದೆ.

ಹಾಲೆಮರ ಮತ್ತು ಆಟಿ :

ಹಾಲೆಮರಕ್ಕೆ ಪಾಲಶ, ಮುರಾರಿ ಎಂಬ ಹೆಸರುಗಳಿವೆ. ಒಂದು ತೊಟ್ಟಿಗೆ ಏಳುಎಲೆಯಿರುವ ಕಾರಣ ಸಪ್ತಪರ್ಣಿ ಎಂದೂ ಕರೆಯುತ್ತಾರೆ. Alstonia Scholaris ಎಂದು ವೈಜ್ಞಾನಿಕವಾಗಿ ಗುರುತಿಸಿಕೊಳ್ಳುವ ಇದನ್ನು ಕಪ್ಪುಕಾಂಡವಿರುವ ಕಾರಣ Black Board Tree, ಈ ಮರದಲ್ಲಿ ಪ್ರೇತಗಳಿರುತ್ತವೆ ಎಂಬ ನಂಬಿಕೆಯ ಕಾರಣಕ್ಕೆ Devil Tree, ಬಿಳಿಹಾಲಿನಂತೆ ರಸ ಒಸರುವ ಕಾರಣಕ್ಕೆ MilkWood Tree, Milkwood – Pine, White Chees Wood, Ditabark ಎಂದೆಲ್ಲಾ ಜನ ಕರೆಯುತ್ತಾರೆ. ಭಾರತ, ಇಂಡೋಮಲಯ, ಆಸ್ಟ್ರೇಲಿಯಾ, ಮಲೇಶಿಯಾ ಮುಂತಾದೆಡೆ ಇವು ಸಾಮಾನ್ಯವಾಗಿ ಬೆಳೆಯುತ್ತವೆ. ಇದರ ತಾಯಿಬೇರನ್ನು ಕಂಡವರಿಲ್ಲಂತೆ. ಆಳ ಬೇರೂರುವ ವಿಶಾಲ ಕಾಂಡದ, ದಟ್ಟ ಹಸಿರು ಎಲೆಗಳಿರುವ, ಕಾರ್ತಿಕ ಮಾಸದಲ್ಲಿ ಗಾಢಗಂಧದ ಹೂಬಿಡುವ ಗಟ್ಟಿಮರವಿದು. ವಾಮನರೂಪಿ ನಾರಾಯಣನಿಂದ ಪಾತಾಳಕ್ಕೆ ಅದುಮಲ್ಪಟ್ಟ ತುಳುನಾಡಿನೊಡೆಯ ಬಲೀಂದ್ರನಿಗೆ ತನ್ನಾಳ್ವಿಕೆಯ ಸೀಮೆಯನ್ನು ಆಟಿಯ ಅಮಾವಾಸ್ಯೆ, ಶ್ರಾವಣದ ಸಂಕ್ರಮಣ, ದೀಪಾವಳಿಯ ಪಾಡ್ಯ ಹೀಗೆ ವರ್ಷಕ್ಕೆ ಮೂರು ಬಾರಿ ಮಾತ್ರ ನೋಡಿಹೋಗುವ ಅವಕಾಶವಿದ್ದು ಆಟಿಗೆ ಬಂದ ಬಲೀಂದ್ರ ಈ ಹಾಲೆಮರದಲ್ಲೇ ಆಸರೆ ಪಡೆದಿರುತ್ತಾನಂತೆ.

ಔಷಧೀಯ ಅಂಶ :

ಹಾಲೆಮರದಲ್ಲಿ ಆಟಿ ಅವಮಾಸ್ಯೆಯಂದು ಮುಂಜಾನೆ ಸಾವಿರದೊಂದು ಔಷಧಿಯ ಸತ್ವವಿರುತ್ತದೆಂದು ಪ್ರಾಚೀನರ ವಿಶ್ವಾಸ. ಕೆಲವರ್ಷಗಳ ಹಿಂದೆ ಆಯುರ್ವೇದ ವೈದ್ಯರ ತಂಡ ಈ ನಂಬಿಕೆಯನ್ನೊಮ್ಮೆ ಪರೀಕ್ಷೆಗೊಳಪಡಿಸಿತ್ತು. ಆಟಿ ಅಮಾವಾಸ್ಯೆಯ ನಾಲ್ಕು ದಿನ ಮುಂಚಿತವಾಗಿ ಹಾಲೆಮರದ ರಸ ಸಂಗ್ರಹಿಸಿದಾಗ ಇದ್ದ ಮದ್ದಿನ ಪ್ರಮಾಣಕ್ಕಿಂತ ಅಮವಾಸ್ಯೆಯ ನಸುಕಿನಲ್ಲಿ ಸಂಗ್ರಹಿಸಿದ ಔಷಧೀಯ ಗುಣ ಹೆಚ್ಚಿರುವುದನ್ನು ಸಾಬೀತು ಪಡಿಸಿತ್ತು. ಹಾಲೆ ಮರದ ತೊಗಟೆಯ ರಸ ಉಷ್ಣಪ್ರಕೃತಿಯುಳ್ಳದ್ದು. ವೈಜ್ಞಾನಿಕ ಸಂಶೋಧನೆಯ‌ ಪ್ರಕಾರ ಇದರಲ್ಲಿ ಪ್ಲಾವನಾಯ್ಡ್ಸ್ ಎಂಬ ರಾಸಾಯನಿಕ ಅಂಶ ಚರ್ಮ ಅಲರ್ಜಿ, ಊತವನ್ನು ನಿಯಂತ್ರಿಸುತ್ತದೆ. ನೈಸರ್ಗಿಕ ಸಿರಾಯ್ಡ್ ಮತ್ತು ಟೆರ್ಪೆನಾಯ್ಡ್ ಅಂಶಗಳು ಶಾರೀರಿಕ ಯೌವ್ವನ (ಏಂಟಿ ಏಜಿಂಗ್) ವನ್ನು ಕಾಪಾಡುತ್ತದೆ. ದೇಹದೊಳಗೆ ಸೇರಿರುವ ಕೂದಲು, ಉಗುರು ಮುಂತಾದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಬಿರುಮಳೆಯ ಶೀತ ವಾತಾವರಣದಲ್ಲಿ ಹಾಲೆಮರದ ಉಷ್ಣಗುಣ ದೇಹಸಮತೋಲನಕ್ಕೆ ಪೂರಕವಾಗಿರುತ್ತದೆ.

ಸಂಗ್ರಹಿಸುವ ವಿಧಾನ :

ಆಟಿ ಅಮಾವಾಸ್ಯೆಯಂದು ನಾಲ್ಕನೇ ಜಾವ ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಬೆಳಕು ಮೂಡುವ ಮುನ್ನ ಈ ಹಾಲೆ ಮರದ ರಸವನ್ನು ಸಂಗ್ರಹಿಸುವುದು ಕ್ರಮ. ಮೊದಲ ದಿನ ತಂದು ಶೇಖರಿಸಿಡುವುದೋ ಬೆಳಕು ಹರಿದ ನಂತರ ಸಾವಕಾಶವಾಗಿ ತರುವುದೋ ಸಲ್ಲದು. ಅಮಾವಾಸ್ಯೆಯಂದೇ ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಆ ವರೆಗಿದ್ದ ಮದ್ದಿನ ಸತ್ವಗುಣ ಕಡಿಮೆಯಾಗಿರುವುದನ್ನೂ ವೈದ್ಯರು ಗುರುತಿಸಿದ್ದಾರೆ. ಆಟಿ ಅಮಾವಾಸ್ಯೆಯ ಹಿಂದಿನ ದಿನ ರಾತ್ರಿ ಹಾಲೆಮರದ ಬಳಿಗೆ ಹೋಗಿ ಬುಡದಲ್ಲಿರುವ ಪೊದೆ ಗಿಡಗಂಟಿಗಳನ್ನೆಲ್ಲಾ ಸರಿಸಿ ಶುಚಿಮಾಡಿ ಬರುತ್ತಾರೆ. ಮೇಲ್ನೋಟಕ್ಕೆ ಕಾಸರಕ್ಕನ ಮರದಂತೆಯೇ ಈ ಹಾಲೆಮರವೂ ಕಾಣುವುದರಿಂದ ಗುರುತಿಗೊಂದು ದಾರವನ್ನೂ ಮರಕ್ಕೆ ಕಟ್ಟಿಬರುತ್ತಾರೆ. ಕಬ್ಬಿಣದ ಕತ್ತಿಯೇ ಮೊದಲಾದ ಆಯುಧಗಳು ಮರಕ್ಕೆ ತಾಗಿದಾಕ್ಷಣ ಅದರಲ್ಲಿರುವ ರಾಸಾಯನಿಕ ಅಂಶಗಳು ವಿಷಯುಕ್ತವಾಗುವುದರಿಂದ ಕಲ್ಲಿನಲ್ಲಿ ತೊಗಟೆಗೆ ಗುದ್ದಿ ತೆಗೆಯುವುದು ಪದ್ಧತಿ.ಇದಕ್ಕಾಗಿ ಕಲ್ಲನ್ನೂ ಮರದ ಬುಡದಲ್ಲಿರಿಸಿ ಮರುದಿನ ನಸುಕಿಗೆ ಅನುಕೂಲವಾಗಿಸುವವರೂ ಇದ್ದಾರೆ. ಇನ್ನು ಕೆಲವೆಡೆ ಪೊರಕೆಯಲ್ಲಿ ಮೂರುಬಾರಿ ಮರಕ್ಕೆ ಬಡಿದು ‘ನನ್ನ ರೋಗ ನಿನಗಿರಲಿ, ನಿನ್ನ ಮದ್ದು ನನಗಿರಲಿ’ ಎಂದು ಪ್ರಾರ್ಥಿಸಿ ಬರುತ್ತಾರೆ.

ಮಾರನೇ ದಿನ ಸೂರ್ಯ ಉದಯಿಸುವ ಮುನ್ನವೇ ಮನೆಯ ಗಂಡಸೊಬ್ಬ ಎದ್ದು ಹಾಲೆರಸ ಸಂಗ್ರಹಕ್ಕೆ ತೆರಳುವುದು ವಾಡಿಕೆ. ಹೀಗೆ ಹೋಗುವವರು ಯಾವುದೇ ಉಡುಪಿಲ್ಲದೆ ನಗ್ನವಾಗಿರಬೇಕು. ಹೀಗಿದ್ದರೆ ಮಾತ್ರ ಬೆಳಕು ಹರಿದು ಊರು ಏಳುವ ಮೊದಲೇ ಈ ಕರ್ತವ್ಯ ಮುಗಿಸಿಬಿಡುವ ಅನಿವಾರ್ಯತೆ ಬರುತ್ತದೆ. ಹಾಲೆಮರದ ರಸ ತೊಟ್ಟ ವಸ್ತ್ರಕ್ಕೆ ಚಿಮ್ಮಿದರೆ ಅದರ ಕಲೆಗುರುತೂ ಮಾಸಿಹೋಗದೆಂಬ ಕಾರಣಕ್ಕೂ ಈ ನಿಯಮ ಜಾರಿಯಲ್ಲಿರಬೇಕು. ದೈವಗಳೆಲ್ಲವೂ ಘಟ್ಟವೇರಿ ಹೋದ ಆಟಿಯ ಸಮಯಕ್ಕೆ ಊರಿಗಿಳಿದ ಪ್ರೇತಗಳು ಇದೇ ಹಾಲೆಮರದಲ್ಲಿ ಆಶ್ರಯಪಡೆದಿರುತ್ತದೆಯಂತೆ ಅದರ ಬಾಧೆಯಿಂದ ತಪ್ಪಿಸಲೂ ಈ ಕ್ರಮವಿದೆ ಎಂದು ತುಳುವರು ನಂಬುತ್ತಾರೆ.

ವಿವಸ್ತ್ರನಾಗಿ ಹಾಲೆಮರದತ್ತ ತೆರಳಿದವರು ಮನೆಯಿಂದ ಕೊಂಡೊಯ್ದ ಅಥವಾ ಮುನ್ನಾದಿನ ಬಡದಲ್ಲಿರಿಸಿದ್ದ ಇಲ್ಲವೇ ತಕ್ಷಣಕ್ಕೆ ಅಲ್ಲೆಲ್ಲಾ ಹುಡುಕಾಡಿ ಸಿಕ್ಕ ಕಲ್ಲಿನಿಂದ ತೊಗಟೆಯನ್ನು ಗುದ್ದಿ ತೆಗೆದು ತರುತ್ತಾರೆ. ಗುದ್ದಿದ ಕಾಂಡದ ಭಾಗಕ್ಕೆ ಕೆಮ್ಮಣ್ಣು ಮೆತ್ತಿ ಬರುವ ಕ್ರಮವೂ ಗ್ರಾಮೀಣ ಪರಿಸರದಲ್ಲಿದೆ. ಮಣ್ಣು ಲೇಪನಮಾಡಿದರೆ ಗುದ್ದಿತೆಗೆದ ಸ್ಥಳದಲ್ಲಿ ಬೇಗ ಹೊಸ ತೊಗಟೆ ಮೂಡುತ್ತದೆ ಎಂದು ನಂಬಲಾಗುತ್ತದೆ.
ಮನೆಗೆ ತಂದ ಹಾಲೆ‌ತೊಗಟೆಯನ್ನು ಜಜ್ಜಿ ತೆಗೆದ ರಸಕ್ಕೆ ಬೆಳ್ಳುಳ್ಳಿ, ಕರಿಮೆಣಸು, ಜೀರಿಗೆ ಬೆರೆಸಿ, ಬೆಳ್ಗಲ್ಲೊಂದನ್ನು ಕೆಂಡದಲ್ಲಿ ಕಾಯಿಸಿ ಒಗ್ಗರಣೆ ಹಾಕುತ್ತಾರೆ. ಇದರಿಂದ ರಸದಲ್ಲಿ ಅಕಸ್ಮಾತ್ ವಿಷಾಂಶವಿದ್ದರೂ ಅದು ಶಮನವಾಗುತ್ತದೆ. ಅರ್ಧರ್ಧ ಲೋಟೆಯಷ್ಟು ಆಟಿಮದ್ದು ಕುಡಿದವರೆಲ್ಲರೂ ಅದರ ಕಹಿ ನಿವಾರಣೆಗೆ ಬೆಲ್ಲದ ಚೂರೊಂದನ್ನು ಚಪ್ಪರಿಸುತ್ತಾರೆ. ಮದ್ದಿನ ಉಷ್ಣವಿಳಿದು ಶರೀರ ತಂಪಾಗಲು ಅಂದು ಬೆಳಿಗ್ಗಿನ ಆಹಾರವಾಗಿ ಮೆಂತೆ, ತೆಂಗಿನಕಾಯಿ, ಕೊತ್ತಂಬರಿಯ ಗಂಜಿ ಮಾಡಿ ಉಣ್ಣುತ್ತಾರೆ.

ಜನಪದರ ದೇಸೀ ವಿಜ್ಞಾನದ ಉತ್ಪನ್ನವಾಗಿರುವ ಈ ಆಟಿಯ ಮದ್ದಿನ ಪರಿಕಲ್ಪನೆಯು ನಿರಕ್ಷರಿಗಳಾದರೂ ಅಂದಿನವರಲ್ಲಿದ್ದ ಸಮೃದ್ಧ ಲೋಕಜ್ಞಾನವನ್ನು ವಿಶದಪಡಿಸುತ್ತದೆ. ಇಂದು ವರ್ಷದ ಆಚರಣೆಯ ರೂಪದಲ್ಲಾದರೂ ನಿಸರ್ಗ ದತ್ತ ವೈದ್ಯಪದ್ಧತಿಯ ಕಡೆಗೆ ಲಕ್ಷ್ಯ ಹರಿಸುವಂತಹ ಸದವಕಾಶವನ್ನು ಇದು ಕಲ್ಪಿಸುತ್ತದೆ. ಮೇಲ್ನೋಟಕ್ಕೆ ಆಟಿ ಅಮಾವಾಸ್ಯೆಯ ಸಂಪ್ರದಾಯಗಳು ಆಗಿಹೋದ ನಮ್ಮ ತಲೆಮಾರುಗಳ ಯಕಶ್ಚಿತ್ ನಂಬಿಕೆ ಮಾತ್ರದಂತೆ ಕಾಣುತ್ತವೆಯಾದರೂ ಸಾರ್ವಕಾಲಿಕ ಸತ್ಯವಾಗಿಯೇ ಉಳಿಯಬಲ್ಲ ಅವರ ಲೋಕಾನುಭವ ಇಲ್ಲಿ ಮೆಚ್ಚಲೇ ಬೇಕಾದದ್ದು. ಆದ್ದರಿಂದಲೇ ಆಧುನಿಕ ವಿಜ್ಞಾನ ಬಾನೆತ್ತರಕ್ಕೆ ಬೆಳೆದು ಮೆರೆಯುವ ವರ್ತಮಾನದಲ್ಲೂ ಆಟಿಯ ಅಮಾವಾಸ್ಯೆಯಂದು ಶಾಲಾ ಕಾಲೇಜುಗಳು, ಸಂಘ-ಸಂಸ್ಥೆಗಳು, ವೈದ್ಯಕೀಯ ಘಟಕಗಳೂ ಆಟಿ ಮದ್ದನ್ನು ಸಾರ್ವಜನಿಕವಾಗಿ ವಿತರಿಸುವ ಧೈರ್ಯ ತೋರುತ್ತಿವೆ.

– ಡಾ. ಅರುಣ್ ಉಳ್ಳಾಲ್
- Advertisement -

Related news

error: Content is protected !!