ನವದೆಹಲಿ: ಭಾರತದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್, ತನ್ನ ಲಾಜಿಸ್ಟಿಕ್ಸ್ ಮತ್ತು ಡೇಟಾ ಸೆಂಟರ್ ಸಂಬಂಧಿತ ವ್ಯವಹಾರಗಳಿಗಾಗಿ ಗುಜರಾತ್ ಮೂಲದ ಅದಾನಿ ಗ್ರೂಪ್‌ನೊಂದಿಗೆ ವಾಣಿಜ್ಯ ಸಹಭಾಗಿತ್ವಕ್ಕೆ ಕೈಜೋಡಿಸಿದೆ.

ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಕಂಪನಿಯು ತನ್ನ ಪೂರೈಕೆ ಸರಪಳಿ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ತನ್ನ ಗ್ರಾಹಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಅದಾನಿ ಲಾಜಿಸ್ಟಿಕ್ಸ್ ಲಿಮಿಟೆಡ್‌ನೊಂದಿಗೆ ಕೆಲಸ ಮಾಡುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ನಮ್ಮ ಹೊಸ ಪಾಲುದಾರರಾಗಿದ್ದು, ಈ ದ್ವಿಮುಖ ಪಾಲುದಾರಿಕೆಯಲ್ಲಿ, ಅದಾನಿಕಾನೆಕ್ಸ್ 5,34,000 ಚದರ ಅಡಿಯ ಹೊಸ ಡೇಟಾ ಕೇಂದ್ರವನ್ನು ನಿರ್ಮಿಸಲಿದೆ. ಈ ಮೂಲಕ ಮುಂಬೈನಲ್ಲಿ ಸಾವಿರಾರು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಗೌತಮ್ ಅದಾನಿ ಟ್ವೀಟ್ ಮಾಡಿದ್ದಾರೆ.

ಇದರ ಜೊತೆಯಲ್ಲಿ, ಫ್ಲಿಪ್‌ಕಾರ್ಟ್ ತನ್ನ ಮೂರನೇ ಡೇಟಾ ಕೇಂದ್ರವನ್ನು ಚೈನ್ನೈನಲ್ಲಿರುವ ಅದಾನಿಕಾನೆಕ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ನಿರ್ಮಿಸಲಿದೆ. ಅದಾನಿಕಾನೆಕ್ಸ್ ಪ್ರೈವೇಟ್ ಲಿಮಿಟೆಡ್ ಎಡ್ಜ್‌ಕಾನ್ನೆಕ್ಸ್ ಮತ್ತು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ನಡುವೆ ಇತ್ತೀಚೆಗೆ ರೂಪುಗೊಂಡ ಹೊಸ ಜಂಟಿ ಉದ್ಯಮವಾಗಿದೆ.

ಅದಾನಿ ಲಾಜಿಸ್ಟಿಕ್ಸ್ ಲಿಮಿಟೆಡ್ ಮುಂಬೈನಲ್ಲಿ ಲಾಜಿಸ್ಟಿಕ್ಸ್ ಹಬ್ ಅನ್ನು ನಿರ್ಮಿಸುತ್ತಿದೆ. ಈ ಹಬ್‌ನಲ್ಲಿ ಅದಾನಿ ಸಂಸ್ಥೆಯು 5.34 ಲಕ್ಷ ಚದರ ಅಡಿಯ ಗೋದಾಮು ನಿರ್ಮಿಸಲಿದೆ. ಪಶ್ಚಿಮ ಭಾರತದಲ್ಲಿ ಹೆಚ್ಚುತ್ತಿರುವ ಇ-ಕಾಮರ್ಸ್‌ಗೆ ಬೇಡಿಕೆ ಮತ್ತು ಮಾರುಕಟ್ಟೆ ಪ್ರವೇಶವನ್ನು ಬೆಂಬಲಿಸಲು ಫ್ಲಿಪ್‌ಕಾರ್ಟ್‌ಗೆ ಗುತ್ತಿಗೆ ನೀಡಲಾಗುವುದು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಫ್ಲಿಪ್‌ಕಾರ್ಟ್‌ನ ಪೂರೈಕೆ ಸರಪಳಿಯ ಮೂಲಸೌಕರ್ಯವನ್ನು ಬಲಪಡಿಸುವುದರ ಜೊತೆಗೆ, ಸ್ಥಳೀಯ ಉದ್ಯೋಗವನ್ನು ಹೆಚ್ಚಿಸುವುದಾಗಿ ಕಂಪನಿ ತಿಳಿಸಿದೆ. ಇದರಿಂದ 2,500 ನೇರ ಉದ್ಯೋಗಗಳನ್ನು ಮತ್ತು ಸಾವಿರಾರು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಯಾಗುತ್ತವೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.
