Wednesday, October 28, 2026
spot_imgspot_img
spot_imgspot_img

ಬೆಂಗಳೂರು ಮೆಟ್ರೋದಲ್ಲಿ ಯುವತಿಯ ವಿಡಿಯೋ ಚಿತ್ರೀಕರಣ ಆರೋಪ – ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲು

- Advertisement -
- Advertisement -

ಬೆಂಗಳೂರು: ವೈಟ್‌ಫೀಲ್ಡ್‌ನ ಕಾಡುಗೋಡಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರನ್ನು ಸಹಪ್ರಯಾಣಿಕನೊಬ್ಬ ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಸೌಪಿಕಾ ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಗುರುತಿಸಿಕೊಂಡಿರುವ ಮಹಿಳೆ, ಈ ಘಟನೆ ಮಂಗಳವಾರ ಸಂಜೆ ಸುಮಾರು 4.30ರ ವೇಳೆಗೆ ವೈಟ್‌ಫೀಲ್ಡ್‌ನ ಮೆಟ್ರೋ ರೈಲಿನಲ್ಲಿ ನಡೆದಿದೆ ಎಂದು ಆರೋಪಿಸಿದ್ದಾರೆ. ಘಟನೆ ಬಳಿಕ ತಾವು ಎದುರಿಸಿದ ಅನುಭವವನ್ನು ವಿವರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯುವತಿ ಹಂಚಿಕೊಂಡಿರುವ ವಿಡಿಯೋದಲ್ಲಿ, ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಲಾದ ವ್ಯಕ್ತಿಯನ್ನು ಆಕೆ ಪ್ರಶ್ನಿಸುತ್ತಿರುವ ದೃಶ್ಯಗಳಿವೆ. ಆತನ ಮೊಬೈಲ್ ಫೋನ್ ಹಿಡಿದುಕೊಂಡ ಯುವತಿ, ‘ನನ್ನನ್ನು ಯಾಕೆ ವಿಡಿಯೋ ಮಾಡುತ್ತಿದ್ದೆ?’ ಎಂದು ಪದೇಪದೆ ಪ್ರಶ್ನಿಸಿದ್ದಾರೆ. ಅಲ್ಲದೆ, ಮೊಬೈಲ್ ಅನ್‌ಲಾಕ್ ಮಾಡುವಂತೆಯೂ ಕೇಳಿದ್ದಾರೆ.

ಈ ವೇಳೆ ಮೆಟ್ರೋ ಭದ್ರತಾ ಸಿಬ್ಬಂದಿಯೂ ಸ್ಥಳದಲ್ಲಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಯುವತಿಯು, ಮೆಟ್ರೋ ನಿಲ್ದಾಣದಲ್ಲಿ ರೈಲು ನಿಂತಾಗ ಆ ವ್ಯಕ್ತಿ ಅಲ್ಲಿಂದ ತೆರಳಲು ಯತ್ನಿಸಿದ್ದಾನೆ. ಆತನ ಫೋನ್‌ ಅನ್ನು ಭದ್ರತಾ ಸಿಬ್ಬಂದಿಗೆ ನೀಡಿದ್ದರೂ, ಆತ ಮತ್ತೆ ಫೋನ್‌ ಪಡೆದು ಓಡಿಹೋದ ಎಂದು ಆಕೆ ಆರೋಪಿಸಿದ್ದಾರೆ. ತಾವು ಧರಿಸಿದ್ದ ಬಟ್ಟೆಯನ್ನೂ ವಿಡಿಯೋದಲ್ಲಿ ತೋರಿಸಿರುವ ಮಹಿಳೆ, ದೇಹ ಕಾಣಿಸುವಂತೆ ಬಟ್ಟೆ ಧರಿಸಿರಲಿಲ್ಲ ಎಂದು ಹೇಳಿದ್ದಾರೆ. ತಮ್ಮ ಉಡುಪು ಈ ಘಟನೆಗೆ ಕಾರಣವಲ್ಲ ಎಂಬುದನ್ನು ಒತ್ತಿಹೇಳಿದ್ದಾರೆ.

‘‘ಕ್ಷಮೆ ಕೇಳುತ್ತೀಯಾ, ಹಾಗಾದರೆ ವಿಡಿಯೋ ಮಾಡಿದ್ದನ್ನು ಒಪ್ಪಿಕೊಳ್ಳುತ್ತೀಯಾ?’’ ಎಂದು ವಿಡಿಯೋದಲ್ಲಿನ ಮತ್ತೊಂದು ದೃಶ್ಯದಲ್ಲಿ, ಮೆಟ್ರೋ ಲಿಫ್ಟ್‌ನಲ್ಲಿ ಯುವತಿ ಆ ವ್ಯಕ್ತಿಯನ್ನು ಪ್ರಶ್ನಿಸುವುದು ಕಂಡುಬರುತ್ತದೆ. ‘‘ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ’’ ಎಂದು ಮಹಿಳೆ ಹೇಳಿದಾಗ, ಆತ ಕ್ಷಮೆ ಕೇಳುತ್ತಾನೆ. ಅದಕ್ಕೆ ಯುವತಿ, ‘‘ಕ್ಷಮೆ ಕೇಳುತ್ತಿದ್ದೀಯಾ? ಹಾಗಾದರೆ ನನ್ನನ್ನು ವಿಡಿಯೋ ಮಾಡಿದ್ದನ್ನು ಒಪ್ಪಿಕೊಳ್ಳುತ್ತೀಯಾ?’’ ಎಂದು ಪ್ರಶ್ನಿಸುತ್ತಾರೆ. ಆದರೆ ಆತ ಅದನ್ನು ನಿರಾಕರಿಸುತ್ತಾನೆ.

ನಂತರವೂ ಯುವತಿ ಮೊಬೈಲ್ ಅನ್‌ಲಾಕ್ ಮಾಡಿ ಪಾಸ್‌ವರ್ಡ್ ನೀಡುವಂತೆ ಕೇಳುತ್ತಾರೆ. ಆದರೆ ಆತ ಫೋನ್‌ ಅನ್ನು ಮರಳಿ ಪಡೆದು ಅಲ್ಲಿಂದ ತೆರಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಬೆಂಗಳೂರು ನಗರ ಪೊಲೀಸರು ಮಹಿಳೆಯನ್ನು ಸಂಪರ್ಕಿಸಿ, ಘಟನೆಯ ನಿಖರ ಸ್ಥಳದ ಮಾಹಿತಿ ಮತ್ತು ಸಂಪರ್ಕ ಸಂಖ್ಯೆಯನ್ನು ಖಾಸಗಿ ಸಂದೇಶದ ಮೂಲಕ ನೀಡುವಂತೆ ಪೊಲೀಸರು ಕಾಮೆಂಟ್‌ನಲ್ಲಿ ಮನವಿ ಮಾಡಿದ್ದರು. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ವರದಿಯಿಮದ ತಿಳಿದುಬಂದಿದೆ.

ನಂತರ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಯುವತಿ, ತಾವು ಕಾಡುಗೋಡಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಪೊಲೀಸರು ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ, ಶೀಘ್ರವಾಗಿ ತನಿಖೆ ನಡೆಸುವ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!