ವರದಿ :-ಕಿರಣ್ ಕೋಟ್ಯಾನ್ ಕೇಪು
ಶಿಲ್ಪಾ ಪೈಲೂರು.
ಕರಾವಳಿಯಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲೂ ಸೇವೆ
ನಿಸ್ವಾರ್ಥ ಮನಸ್ಸಿನ ಯುವಕರ ಸಮಾಜ ಸೇವೆ
ಬಡವರ ಸೇವೆಯೇ ಈ ತಂಡಕ್ಕೆ ದೇವರ ಸೇವೆ
ಹಿರಿಯರ ಸಲಹೆ ಈ ತಂಡಕ್ಕೆ ಹುಮ್ಮಸ್ಸು
ಸಮಾಜ ಸೇವೆ ಮಾಡಲು ನಿಸ್ವಾರ್ಥ ಮನಸ್ಸಿದ್ದರೆ ಸಾಕು. ಯಾವ ರೀತಿಯಲ್ಲಾದೂ ಕಷ್ಟದಲ್ಲಿರುವರಿಗೆ ಸಹಾಯ ಮಾಡಿ ಅವರ ಬಾಳಲ್ಲಿ ಬೆಳಕು ತರಬಹುದು. ಬಡ ಜನರ ಸೇವೆಯೇ ದೇವರ ಸೇವೆ ಎಂದು ಕಾಣುತ್ತಾ ಕರಾವಳಿಯಲ್ಲೊಂದು ಸಂಸ್ಥೆ ಸೇವೆ ಸಲ್ಲಿಸುತ್ತಾ ಬಂದಿದೆ. ಅಷ್ಟಕ್ಕೂ ಈ ಸಂಸ್ಥೆ ಬೇರೆ ಯಾವುದು ಅಲ್ಲ…ಬಡವರ ಪಾಲಿನ ‘ಅಮೃತಸಂಜೀವಿ’ ಸಂಸ್ಥೆ.
5 ವರ್ಷ ಪೂರೈಸಿ 6 ನೇ ವರ್ಷಕ್ಕೆ ಕಾಲಿಟ್ಟಿ ಸಂಸ್ಥೆ:
ಬಾವಿಯೊಳಗಿನ ಕಪ್ಪೆಯಂತೆ ಸೀಮಿತ ಜಗತ್ತನ್ನು ಕಲ್ಪಿಸಿಕೊಂಡಂತೆ ನಾವು ಸೀಮಿತಗೊಳಗಾಗಬಾರದು. ನಿರ್ಮಲ ಮನಸ್ಸಿನಿಂದ, ಸಕಲರ ಹಿತದಲ್ಲಿ ತನ್ನ ಹಿತ ಅಡಗಿದೆಯೆಂಬ ಧೋರಣೆಯನ್ನು ಮನದಟ್ಟು
ಮಾಡಿ ಯುವಕರನ್ನು ಸೇವೆಗೆ ಪ್ರೇರೇಪಣೆ ನೀಡುತ್ತ ಬಂದಿದೆ ಈ ಸಂಸ್ಥೆ. ಅಮೃತಸಂಜೀವಿನಿಯ ಹುಟ್ಟು ಕೆಲವೇ ಕೆಲವು ಯುವಕರ ಚಿಂತನೆಯ ಪ್ರತೀಕವಾಗಿತ್ತು. ಆದರೆ ಇಂದು ಸುಮಾರು 2 ಸಾವಿರಕ್ಕೂ ಅಧಿಕ ಸೇವಾ ಮನೋಭಾವದ ಸದಸ್ಯರನ್ನು ಒಳಗೊಂಡಿದೆ. ಅಷ್ಟೇ ಅಲ್ಲ, 5 ವರ್ಷ ಪೂರೈಸಿದ 6 ನೇ ವರ್ಷಕ್ಕೆ ಕಾಲಿಟ್ಟಿದೆ ಈ ಸಂಸ್ಥೆ.
ಆಗಸ್ಟ್ 2ರಂದು ಮಂಗಳೂರಿನ ಅರ್ಯ ಸಮಾಜದಲ್ಲಿ ಒಟ್ಟಾದ ಬೆರಳೆಣಿಕೆಯ ಯುವಕರು ಯೋಚಿಸಿದ ಚಿಂತನೆಯನ್ನು ಅಮೃತಸಂಜೀವಿನಿ ಎನ್ನುವ ನಾಮಾಂಕಿತ ಮಾಡಿ ವ್ಯವಸ್ಥಿತ ಸಂಸ್ಥೆಯಾಗಿ ಮಾರ್ಪಾಡು ಮಾಡಲಾಯಿತು. ಪ್ರಥಮವಾಗಿ ಒಂದು ಬಡ ಕುಟುಂಬದ ಕಷ್ಟಕ್ಕೆ ಸಹಕರಿಸಿ ಅದರಲ್ಲಿ ಸಂತೃಪ್ತಿಯ ಭಾವನೆ ಪಡೆದ ಸದಸ್ಯರು ಮತ್ತೆ ಎಂದು ಹಿಂದಿರುಗಿ ನೋಡಲೇ ಇಲ್ಲ. ಇದರ ಫಲವಾಗಿ ಇಂದು 5 ವರ್ಷಗಳ ಪಯಣವನ್ನು ಮುಗಿಸಿ 6ನೇ ವರ್ಷಕ್ಕೆ ಕಾಲಿಡುತ್ತಿದೆ.
ಸಮಾಜದ ಬದಲಾವಣೆಗೆ ಸ್ಪಂದಿಸಲು ತುಡಿಯುತ್ತಿದ್ದ ಯುವಕರ ತಂಡ ಅಮೃತಸಂಜೀವಿನಿ ಎಂಬ ಸೇವಾ ಆಶ್ರಯದಡಿಯಲ್ಲಿ ಇಷ್ಟೊಂದು ಸುಸೂತ್ರವಾಗಿ ಸಮಾಜದ ಮುಂದೆ ಬಂದು ನಿಲ್ಲಲು ಶ್ರೀ ಗುರು ದತ್ತಾತ್ರೇಯನ ಕರುಣೆಯೇ ಕಾರಣವಂತೆ. ಹಾಗೇಯೇ ಯುವಕರ ಈ ಪಡೆಗೆ ದಕ್ಷ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ ಯತಿವರ ಶ್ರೀ ರಾಜಶೇಖರಾನಂದ ಸ್ವಾಮಿಜೀ.
ಅಲ್ಲಲ್ಲಿ ಸಂಜೀವಿನಿ ಪರಿವಾರ ಸಂಸ್ಥೆಗಳ ಉಗಮ:
ಅಮೃತಸಂಜೀವಿನಿ ತನ್ನ ಸೇವಾ ಕಾರ್ಯವನ್ನು ಕರಾವಳಿಯ ಉದ್ದಕ್ಕೂ ಅಲ್ಲದೆ ಹೊರದೇಶಗಳಲ್ಲಿಯೂ ಪಸರಿಸುತ್ತಾ ಬಂದಿದ್ದು, ಅಲ್ಲಲ್ಲಿ ಕೆಲವು ಸೇವಾಪ್ರೇರಿತ ಯುವಶಕ್ತಿಗಳಿಂದ ಸಂಜೀವಿನಿ ಪರಿವಾರ ಸಂಸ್ಥೆಗಳ ಉಗಮವಾಗಿದ್ದು, ಇದೀಗ ಇಪ್ಪತ್ತಾರಕ್ಕು ಮಿಗಿಲಾಗಿ ಪರಿವಾರ ಸಂಸ್ಥೆಗಳು ಹುಟ್ಟಿಕೊಂಡು ಅಮೃತಸಂಜೀವಿನಿಗೆ ಧೈರ್ಯ ತುಂಬುತ್ತಿದೆ.
50 ಬಡ ಕುಟುಂಬಕ್ಕೆ ಒಂದೇ ವೇದಿಕೆಯಲ್ಲಿ ಸಹಾಯಧನ:
ಈ ಪರಿವಾರ ಸಂಸ್ಥೆಗಳು ಜತೆಯಾಗಿ ಕೆಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಜೀವಿನಿ ಸೇವಾಸಂಗಮ, ಸಂಜೀವಿನಿ ಮಹಾಸಂಗಮದಂತ ಕಾರ್ಯಕ್ರಮವನ್ನು ಅಮೃತಸಂಜೀವಿನಿ ಬಂಟ್ವಾಳ ತಾಲೂಕು ಹಾಗೂ ಯುವ ಶಕ್ತಿ ಕಡೇಶಿವಾಲಯ ಆಯೋಜಿಸಿದೆ. 50ನೇ ತಿಂಗಳ ಸವಿ ನೆನಪಿಗಾಗಿ ರಾಜಕೇಸರಿ ಯೂತ್ ಕ್ಲಬ್ ಗಂಜಿಮಠ ಸುವರ್ಣಸಂಗಮ ಎನ್ನುವ ಕಾರ್ಯಕ್ರಮ ಆಯೋಜಿಸಿ 50 ಬಡ ಕುಟುಂಬಕ್ಕೆ ಒಂದೇ ವೇದಿಕೆಯಲ್ಲಿ ಸಹಾಯಧನ ನೀಡಲಾಗಿದೆ.
ಅಮೃತಸಂಜೀವಿಯ ಸಾಧನೆ ಅಪಾರ
ಇಂದು ಈ ಸಂಸ್ಥೆಯು ಊಹಿಸಲು ಅಸಾಧ್ಯವಾದ ಸಾಧನೆಯನ್ನು ಮಾಡಿದೆ. ಈ ಮೂಲಕ ಸಮಾಜದಲ್ಲಿ ಸೇವೆಯ ಪಥದಲ್ಲಿ ಉತ್ತುಂಗದಲ್ಲಿದೆ ಎಂದರೂ ತಪ್ಪಾಗಲ್ಲ. ಕೇವಲ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಉಪಯೋಗಿಸುವ ಮೂಲಕ ಸಮಾಜಕ್ಕೊಂದು ಸಂದೇಶವನ್ನು ನೀಡುತ್ತಾ ಬಂದಿರುವ ಅಮೃತಸಂಜೀವಿನಿ ಸಂಸ್ಥೆಯು ತನ್ನ ಸೇವಾಪಯಣದಲ್ಲಿ 56 ಮಾಸಿಕ ಯೋಜನೆ,147 ತುರ್ತು ಯೋಜನೆಯೊಂದಿಗೆ,300 ಕ್ಕೂ ಹೆಚ್ಚಿನ ಕುಟುಂಬಗಳಿಗೆ,60 ಲಕ್ಷಕ್ಕೂ ಮಿಗಿಲಾಗಿ ಧನಸಹಾಯ ನೀಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದೆ.
ಸಮಾಜಮುಖಿ ಕಾರ್ಯಗಳಲ್ಲೂ ಎತ್ತಿದ ಕೈ
ಸಂಜೀವಿನಿಗಳು ನಡೆದು ಬಂದ ಹಾದಿಯಲ್ಲಿ ಕೇವಲ ಸೇವೆಗೊಂದೆ ಒತ್ತು ಕೊಡದೆ ಇನ್ನಿತರ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ..ಅಮೃತಸಂಜೀವಿನಿ ಕಾರ್ಯಕರ್ತರು ರಕ್ತದ ತುರ್ತು ಪರಿಸ್ಥಿತಿ ಇದ್ದಲ್ಲಿ ರಕ್ತದಾನ,ಮಂಗಳಮುಖಿಯರೊಂದಿಗೆ ರಕ್ಷಾಬಂಧನ,ಸ್ವಚ್ಛ ಭಾರತ ಕಾರ್ಯಕ್ರಮ, ಸಂಸ್ಥೆಯ ವಾರ್ಷಿಕೋತ್ಸವದ ಸಂಭ್ರಮವನ್ನು ಅನಾಥ ಮಕ್ಕಳ ಮುಖದಲ್ಲಿ ನಗು ತರಿಸುವ ಸಣ್ಣ ಸಣ್ಣ ಕಾರ್ಯಕ್ರಮಗಳ ,ಸೈನಿಕರನ್ನು ಗೌರವಿಸುವ ಸಲುವಾಗಿ ಬಗ್ಗೆ ವಿಶೇಷ ನೆರವು ಕೊಟ್ಟು ಸಹಕರಿಸಲಾಗಿದೆ.
ಹಿರಿಯರ ಸಲಹೆ, ಹೊಸ ಹೊಸ ಸಂಜೀವಿನಿಗಳ ಸೇರ್ಪಡೆಯೇ ಈ ತಂಡಕ್ಕೆ ಹುಮ್ಮಸ್ಸು. ಒಟ್ಟಿನಲ್ಲಿ ತಾನಾಯ್ತು ತನ್ನ ಕೆಲಸವಾಯ್ತು ಎಂಬ ಈ ಕಾಲದಲ್ಲಿ ನಿಸ್ವಾರ್ಥ ಮನಸ್ಸಿಂದ ನೊಂದ, ಕಷ್ಟದಲ್ಲಿರುವು ಜೀವಕ್ಕೆ ನೆರವಾಗುತ್ತಿರುವ ಈ ಯುವಕರ ಕಾರ್ಯ ನಿಜಕ್ಕೂ ಶ್ಲಾಘನೀಯ.
ವರದಿ :-ಕಿರಣ್ ಕೋಟ್ಯಾನ್ ಕೇಪು
ಶಿಲ್ಪಾ ಪೈಲೂರು.