ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಕ್ತರನ್ನು ಸೆಳೆಯುತ್ತಿದೆ ಇವರ ಕೈಚಳಕದಿಂದ ಮೂಡಿಬಂದ ದೇಯಿ ಬೈದ್ಯೆತಿ, ಸಾಯನ ಬೈದ ಕೋಟಿ-ಚೆನ್ನಯ ಮೂರ್ತಿಗಳು


‘ಭಾರತೀಯ ಸಾಂಪ್ರದಾಯಿಕ ಶಿಲ್ಪಕಲೆಯು ವಿಶ್ವದಲ್ಲೇ ವಿಶೇಷವಾಗಿದ್ದು, ವಿಶ್ವದ ಉಳಿದೆಲ್ಲಾ ಕಲಾ ಪ್ರಕಾರಗಳಿಗೆ ಬುನಾದಿಯಾಗಿದೆ. ಹಾಗಾಗಿಯೇ, ದೇಶವು ಶಿಲ್ಪಕಲೆಗಳ ಆಗರವಾಗಿದೆ. ಪ್ರಕೃತಿಯಿಂದ ಸಿಗುವ ಕಲ್ಲು, ಲೋಹ, ಮರ ಜೇಡಿಮಣ್ಣಿನಂತಹ ವಸ್ತುಗಳನ್ನು ಬಳಸಿ ತ್ರಿಮಿತಿಯ ಆಕೃತಿಗಳನ್ನು ರೂಪಿಸುವ ಅದ್ಭುತ ಕಲೆ ಎಂದರೆ ಅದು ಶಿಲ್ಪಕಲೆ. ಇತ್ತೀಚಿನ ದಿನಗಳಲ್ಲಿ ಜನರು ಆಧುನಿಕತೆಯನ್ನು ಹೆಚ್ಚಾಗಿ ಅವಲಂಬಿಸುತ್ತಿರುವ ಕಾರಣ ಶಿಲ್ಪಕಲೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದ್ದಂತೆ, ಶಿಲ್ಪಕಲೆಗಳ ಸೃಷ್ಟಿಕರ್ತರೂ ಕಾಣಸಿಗುವುದು ತೀರಾ ಅಪರೂಪವಾಗಿದೆ.



ಆದರೆ ಇಲ್ಲೊಬ್ಬರು ಮರದ ಕೆತ್ತನೆಯ ಮೂಲಕ ತನ್ನ ಕಲ್ಪನೆಗೂ ಮಿಗಿಲಾದ ಆಕೃತಿಗಳನ್ನು ಸೃಷ್ಟಿಸಿ ಕಲಾಕೃತಿಗೆ ಜೀವತುಂಬಿ ಇಂದು ಮರದ ಕೆತ್ತನೆಯಲ್ಲಿ ಹೆಸರುವಾಸಿಯಾಗಿದ್ದಾರೆ, ಅವರೇ ಕಲಾಕಾರ ರಮೇಶ್ ಕುಲಾಲ್. ಇವರು ಮೂಲತಃ ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲದವರು.
ತುಳುನಾಡಿನ ಅತ್ಯಂತ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಡಗನ್ನೂರಿನಲ್ಲಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿಯು ತುಳುನಾಡಿನ ಸಂಸ್ಕೃತಿ, ಇತಿಹಾಸ ಮತ್ತು ವೀರರ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಇಲ್ಲಿಯ ಪ್ರತಿಯೊಂದು ಮರದ ಕಲಾಕೃತಿಗಳನ್ನು ಕೆತ್ತಿ ಅವೆಲ್ಲದುದಕ್ಕೂ ಜೀವ ತುಂಬಿದ ಕಲಾವಿದ ರಮೇಶ್ ಕುಲಾಲ್.

ದೇಯಿ ಬೈದ್ಯೆತಿಗೆ ನಿರ್ಮಾಣಗೊಂಡ ಪ್ರಥಮ ದೇವಾಲಯವೆಂಬ ಹೆಗ್ಗಳಿಕೆ ಹೊಂದಿರುವ ಈ ದೇವಾಲಯದಲ್ಲಿ ದೇಯಿ ಬೈದ್ಯೆತಿ, ಸಾಯನ ಬೈದ ಹಾಗೂ ತುಳುನಾಡಿನ ವೀರ ಪುರುಷರಾದ ಕೋಟಿ- ಚೆನ್ನಯ ಮರದ ಮೂರ್ತಿಗಳನ್ನು ವಿಭಿನ್ನ ರೀತಿಯಲ್ಲಿ ಸೃಷ್ಟಿಸಿ ಜೀವ ಕೊಟ್ಟವರು ರಮೇಶ್ ಕುಲಾಲ್. ಅಲ್ಲದೆ, ಈ ಕ್ಷೇತ್ರದಲ್ಲಿರುವ ಮರದ ಬಾಗಿಲು, ಹಾಗೂ ಎಲ್ಲಾ ಮರದ ಆಕಾರಗಳು ರಮೇಶ್ ಕುಲಾಲ್ ಇವರ ಕೈ ಚಳಕದಿಂದ ಮೂಡಿ ಬಂದಿರುವುದು ವಿಶೇಷತೆ. ಈ ಕ್ಷೇತ್ರದಲ್ಲಿ ಇವರ ಕೈಚಳಕದಿಂದ ಮೂಡಿ ಬಂದ ಎಲ್ಲಾ ಕಲಾಕೃತಿಗಳಿಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ನೋಡುಗರನ್ನು ತುಂಬಾ ಆಕರ್ಷಿಸುತ್ತಿದೆ.

ಅಲ್ಲದೆ, ಕಳೆದ ಎರಡು ದಿನಗಳ ಹಿಂದೆ ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ ಮಂಜಕೊಟ್ಯದಲ್ಲಿ ಪ್ರಧಾನ ದೈವ ಶ್ರೀ ಶಿರಾಡಿ ದೈವದ ನೇಮೋತ್ಸವದಲ್ಲಿ ಸಮರ್ಪಿಸಿದ ಹುಲಿಯ ಬಂಡಿಯನ್ನು ಸೃಷ್ಟಿಸಿದವರು ರಮೇಶ್ ಕುಲಾಲ್. ಜೀವಂತ ಹುಲಿಯಂತೆಯೇ ಕಾಣುವ ಈ ಕಲಾಕೃತಿ ಬಹಳ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದೆ. ಈ ಕಲಾಕೃತಿಯಲ್ಲಿ ವಿಶೇಷವಾಗಿ ಹುಲಿಯ ರೋಷಭರಿತ ಕಣ್ಣು, ಹಲ್ಲು, ಉಗುರು ಸೇರಿದಂತೆ ಪ್ರತೀಯೊಂದು ಕೆತ್ತನೆಯೂ ಭಕ್ತರನ್ನು ಭಕ್ತಿಯತ್ತ ಆಕರ್ಷಿಸಿದೆ. ಈ ಕಲಾಕೃತಿಯಲ್ಲಿ ರಮೇಶ್ ಕುಲಾಲ್‌ರವರ ಕೆತ್ತನೆಯ ಕೈಚಳಕ, ತಾಳ್ಮೆ, ಹಾಗೂ ಸಮಯ ಪ್ರಜ್ಞೆ ಎದ್ದು ಕಾಣುತ್ತಿದ್ದು ಜನರ ಪ್ರಶಂಸೆಗೆ ಪಾತ್ರವಾಗಿದೆ

ಹೀಗೆ ಹಲವು ದೈವಸ್ಥಾನ ದೇವಸ್ಥಾನಗಳಲ್ಲಿ ವಿಭಿನ್ನ ಕಲಾಕೃತಿಗಳನ್ನು ಸೃಷ್ಟಿಸಿದ ರಮೇಶ್ ಕುಲಾಲ್ ಇವರ ಕೆಲಸಗಳನ್ನು ಗುರುತಿಸಿ ಹಲವು ಕಡೆಗಳಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಮುಂದಕ್ಕೆ ಇನ್ನಷ್ಟು ಪ್ರಶಂಸೆ ಪ್ರಸಿದ್ಧಿಗಳು ದೊರೆತು ದೇಶವೇ ನಿಮ್ಮ ಸಾಧನೆಯನ್ನು ಗುರುತಿಸುವಂತಾಗಲಿ.
6361672176
9741469005
✍️ ಅಶ್ವಿನಿ ಪೆರುವಾಯಿ








