Wednesday, April 23, 2025
spot_imgspot_img
spot_imgspot_img

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಶಿವಮೊಗ್ಗದ ನಿವಾಸಿ ಬಲಿ; ಹಲವರಿಗೆ ಗಾಯ

- Advertisement -
- Advertisement -

ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರಿಂದ ನಡೆದ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ನಿವಾಸಿಯೊಬ್ಬರು ಮೃತಪಟ್ಟಿದ್ದು, ಅವರ ಪತ್ನಿ ಮತ್ತು ಮಗ ಅಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗದ ವಿಜಯನಗರ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದು, ಇವರ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.ಘಟನೆ ಬಗ್ಗೆ ಮಂಜುನಾಥ್ ಪತ್ನಿ ಪಲ್ಲವಿ ಪ್ರತಿಕ್ರಿಯಿಸಿ, ಏ.19ರಂದು ಪ್ರವಾಸಕ್ಕೆ ಹೋಗಿದ್ದೆವು. ನಮ್ಮ ಕಣ್ಣೆದುರಿಗೇ ಪತಿಯನ್ನು ಕೊಲ್ಲಲಾಗಿದೆ. ನನ್ನ ಪತಿಯನ್ನು ಕೊಲ್ಲುವಾಗ ನನ್ನ ಹಾಗೂ ಮಗನನ್ನು ಕೊಂದುಬಿಡಿ ಎಂದು ನಾವು ಉಗ್ರರಿಗೆ ಹೇಳಿದೆವು. ಆಗ ಅವರು ನಿಮ್ಮನ್ನು ಕೊಲ್ಲಲ್ಲ, ಹೋಗಿ ಮೋದಿಗೆ ಹೇಳಿ ಎಂದು ತಿಳಿಸಿದರು. ನನ್ನ ಪತಿ ಮೃತದೇಹವನ್ನು ಶಿವಮೊಗ್ಗಕ್ಕೆ ಸಾಗಿಸಲು ರಾಜ್ಯ ಸರ್ಕಾರ ಫ್ಲೈಟ್‌ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.ಮೃತ ಮಂಜುನಾಥ್‌ ರಾವ್‌ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕುಣಿಮಕ್ಕಿ ಮೂಲದವರು. ಅವರ ತಂದೆ ಶಿವಮೊಗ್ಗದ ಮ್ಯಾಮ್ ಕೋಸ್‌ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದರು. ಹಾಗಾಗಿ 20 ವರ್ಷಗಳ ಹಿಂದೆಯೇ ಕುಟುಂಬಸ್ಥರೊಂದಿಗೆ ಶಿವಮೊಗ್ಗಕ್ಕೆ ತೆರಳಿದ್ದ ಮಂಜುನಾಥ್‌ ತಂದೆ ನಿವೃತ್ತಿ ಬಳಿಕ ಅಲ್ಲೇ ನೆಲೆಸಿದ್ದರು. ಇವರು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿದ್ದರು. ಪತ್ನಿ ಕಡೂರು ತಾಲೂಕಿನ ಬೀರೂರು ಮ್ಯಾಮ್ ಕೋಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಪ್ರವಾಸಿಗರ ಗುಂಪಿನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಬ್ಬ ಪ್ರವಾಸಿಗ ಮೃತಪಟ್ಟಿದ್ದರೆ, ಐದು ಮಂದಿಗೆ ಗಂಭೀರ ಗಾಯಗಳಾಗಿವೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಗಾಯಾಳುಗಳನ್ನು ಅನಂತ್‌ನಾಗ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ದಾಳಿ ನಡೆದ ಸ್ಥಳವನ್ನು ತಲುಪಲು ಪ್ರಯತ್ನಿಸುತ್ತಿವೆ ಆದರೆ ಕಠಿಣ ಭೂಪ್ರದೇಶದಿಂದಾಗಿ ತೊಂದರೆಗಳನ್ನು ಎದುರಿಸುತ್ತಿವೆ. ಇನ್ನು ಲಷ್ಕರ್-ಎ-ತೈಬಾದ ಒಂದು ಶಾಖೆಯು ಘಟನೆಯ ಹೊಣೆ ಹೊತ್ತಿದೆ ಎಂದು ವರದಿಯಾಗಿದೆ.ಮಂಗಳವಾರ ಮಧ್ಯಾಹ್ನ 2:30 ರ ಸುಮಾರಿಗೆ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರ ಗುಂಪು ಪ್ರವಾಸಿಗರ ಮೇಲೆ ಗುಂಡು ಹಾರಿಸಿದೆ. ಬೈಸರನ್ ಹುಲ್ಲುಗಾವಲು ಪಹಲ್ಗಾಮ್ ಗಿರಿಧಾಮದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ ಮತ್ತು ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳ ಮೂಲಕ ಮಾತ್ರ ಪ್ರವೇಶಿಸಬಹುದು. ದಾಳಿಯ ನಂತರ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ನಡೆಸುತ್ತಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ.ಭಯೋತ್ಪಾದಕ ದಾಳಿಯ ನಂತರ, ಅಮಿತ್ ಶಾ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಸಭೆಯಲ್ಲಿ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸುತ್ತಾರೆ. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ದಾಳಿಯನ್ನು ಖಂಡಿಸಿ “ನನಗೆ ನಂಬಲಾಗದಷ್ಟು ಆಘಾತವಾಗಿದೆ. ಪ್ರವಾಸಿಗರ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ನಾನು ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದರು.

- Advertisement -

Related news

error: Content is protected !!