ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿರುವುದರ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಆರೋಪಿಗಳಲ್ಲಿ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸೇರಿದ್ದಾರೆ. ಜನವರಿಯಲ್ಲಿ ಅಯೋಧ್ಯೆಯ ನಿವಾಸಿಗಳಾದ ಹಾಜಿ ಮಹಮೂದ್ ಅಹ್ಮದ್ ಮತ್ತು ಸೈಯದ್ ಅಖ್ಲಾಕ್ ಅಹ್ಮದ್ ಅವರು ಖುಲಾಸೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇದನ್ನು ಹೈಕೋರ್ಟ್‌ನ ಲಕ್ನೋ ನ್ಯಾಯಪೀಠ ವಿಚಾರಣೆ ನಡೆಸಲಿದೆ.
ಕಳೆದ ವರ್ಷ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ನ್ಯಾಯಮೂರ್ತಿ ರಾಕೇಶ್ ಶ್ರೀವಾಸ್ತವ ಅವರ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಸೆಪ್ಟೆಂಬರ್ 30 ರ ತೀರ್ಪಿನ ವಿರುದ್ಧ ಸಿಬಿಐ ಇನ್ನೂ ಮೇಲ್ಮನವಿ ಸಲ್ಲಿಸದ ಕಾರಣ ಇಬ್ಬರು ಅಯೋಧ್ಯೆಯ ನಿವಾಸಿಗಳು ನ್ಯಾಯಾಲಯಕ್ಕೆ ತೆರಳಿದ್ದಾರೆ ಎಂದು ಅರ್ಜಿಯನ್ನು ಸಲ್ಲಿಸುವಾಗ ಜಿಲಾನಿ ಹೇಳಿದ್ದಾರೆ. ಅರ್ಜಿದಾರರು ತಾವು ವಿಚಾರಣೆಯಲ್ಲಿ ಸಾಕ್ಷಿಗಳು ಎಂದು ಹೇಳಿಕೊಂಡಿದ್ದಾರೆ.
ದಾಖಲೆಯಲ್ಲಿ ಸಾಕಷ್ಟು ಪುರಾವೆಗಳು ಇದ್ದರೂ ಸಿಬಿಐ ನ್ಯಾಯಾಲಯವು ಆರೋಪಿಗಳನ್ನು ಶಿಕ್ಷಿಸದೆ ದೋಷ ಎಸಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.