ಲಕ್ನೋ: ಡಿಸೆಂಬರ್ 6, 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದೆ. ಲಖನೌ ಸಿಬಿಐ ಕೋರ್ಟ್‌ನ ಎಸ್.ಕೆ. ಯಾದವ್ ಅವರ ಪೀಠದಿಂದ ತೀರ್ಪು ಹೊರಬೀಳಲಿದೆ. ಬಿಜೆಪಿ ವರಿಷ್ಠರಾದ ಲಾಲ್‌ಕೃಷ್ಣ ಆಡ್ವಾಣಿ, ಮುರುಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ ಸೇರಿದಂತೆ 32 ಪ್ರಮುಖ ನಾಯಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಆದ್ರೆ ಪ್ರಕರಣದಲ್ಲಿ ನನಗೆ ಜಾಮೀನು ಸಿಗುವುದು ಬೇಡ. ಒಂದು ವೇಳೆ ಜಾಮೀನು ಸಿಕ್ಕರೂ ನಾನು ಅದನ್ನು ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವೆ ಉಮಾಭಾರತಿ, ಬಿಜೆಪಿಯ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ ಅಂತ ತಿಳಿದುಬಂದಿದೆ.
ಪ್ರಕರಣದಲ್ಲಿ ನಾನು ಭಾಗಿಯಾಗಿದ್ದೆ ಎಂಬುದೇ ನನಗೆ ಹೆಮ್ಮೆಯ ಸಂಗತಿ. ಈ ಪ್ರಕರಣದಲ್ಲಿ ಒಂದು ವೇಳೆ ನಾನು ಜಾಮೀನು ಪಡೆದುಕೊಂಡುಬಿಟ್ಟರೇ, ನನ್ನ ಘನತೆ ಗೌರವಕ್ಕೆ ಧಕ್ಕೆಯಾಗುತ್ತದೆ. ನಾನು ನೇಣಿಗೇರಲು ಸಿದ್ಧ. ಅದ್ರೆ, ಜಾಮೀನು ಮಾತ್ರ ಖಂಡಿತಾ ಪಡೆಯುವುದಿಲ್ಲ ಎಂದು ಉಮಾಭಾರತಿ ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಕೊರೊನಾ ಸೋಂಕಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಮಾಭಾರತಿ, ಇಂದು ಅಲ್ಲಿಯೇ ತೀರ್ಪು ಆಲಿಸಲಿದ್ದಾರೆ. ಅಡ್ವಾಣಿ ಹಾಗೂ ಜೋಷಿ ಅವರಿಗೂ ಕೂಡ ಅನಾರೋಗ್ಯದ ಹಿನ್ನೆಲೆ ಕೋರ್ಟ್ಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.