Friday, May 3, 2024
spot_imgspot_img
spot_imgspot_img

ಚಂದ್ರಯಾನ-3 ಯಶಸ್ಸಿನ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಮೋದಿ..

- Advertisement -G L Acharya panikkar
- Advertisement -

ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್‌ ಅಂಡ್‌ ಕಮಾಂಡ್‌ ನೆಟ್‌ವರ್ಕ್‌ ಕೇಂದ್ರಕ್ಕೆ ಆಗಮಿಸಿದ್ದಾರೆ.

ಕೇಂದ್ರಕ್ಕೆ ಭೇಟಿ ನೀಡಿ ಇಸ್ರೋ ಅಧ್ಯಕ್ಷ ಸೋಮನಾಥ್‌ ಸೇರಿದಂತೆ ಚಂದ್ರಯಾನ-3 ಮಿಷನ್‌ ತಂಡದೊಂದಿಗೆ ಸುಮಾರು 1 ಗಂಟೆಗಳ ಕಾಲ ಚರ್ಚಿಸಿದರು. ನಂತರ ಚಂದ್ರಯಾನ-3 ಮಿಷನ್‌ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ, ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲ್ಮೈನಲ್ಲಿ ಕಾಲಿಟ್ಟ ದೃಶ್ಯವಿರುವ ಫೋಟೋ ಫ್ರೇಮ್‌ ಅನ್ನು ಇಸ್ರೋ ವಿಜ್ಞಾನಿಗಳು ಉಡುಗೊರೆಯಾಗಿ ನೀಡಿದರು.

ಬೆಳಗ್ಗೆ 6 ಗಂಟೆ ಸುಮಾರಿಗೆ ಮೋದಿ ಅವರು ವಿಶೇಷ ವಿಮಾನದಲ್ಲಿ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ಹೆಚ್‌ಎಎಲ್‌ ಏರ್‌ಪೋರ್ಟ್‌ ಹೊರಗಡೆ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೂರದ ದೇಶದಿಂದ ನೇರವಾಗಿ ಇಲ್ಲಿಗೆ ಬಂದೆ. ಭಾರತದ ಸೂರ್ಯೋದಯವಾಗುತ್ತಿರುವ ಈ ಹೊತ್ತಿನಲ್ಲಿ ಬೆಂಗಳೂರಿಗೆ ಬಂದಿರುವೆ. ನಮ್ಮ ದೇಶದ ವಿಜ್ಞಾನಿಗಳ ಸಾಧನೆಯಿಂದ ಸಂತೋಷವಾಗಿದೆ ಎಂದು ಪ್ರಧಾನಿ ಹೇಳಿದರು.

ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳ ಶಿವಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರಿಟ್ಟಿದ್ದಾರೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಮೋದಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಚಂದ್ರಯಾನದ ಯಶಸ್ಸಿನ ಮೂಲಕ ಭಾರತ ಈಗ ಚಂದ್ರನ ಮೇಲಿದೆ. ಈ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರನ್ನು ಎಷ್ಟು ಹೊಗಳಿದರೂ ಸಾಲದು. ಅವರ ಶ್ರಮಕ್ಕೆ ನಾನು ಅಭಿನಂದಿಸುತ್ತೇನೆ ಎಂದು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಚಂದ್ರಯಾನ-3ರ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಚಂದ್ರಯಾನ-2 ಪತನಗೊಂಡ ಸ್ಥಳಕ್ಕೆ ‘ತಿರಂಗಾ’ ಎಂದು ಇದೇ ವೇಳೆ ಹೆಸರಿಸಿದ್ದಾರೆ. ಭಾರತ ಚಂದ್ರಯಾನ ಹಾಗೂ ಮಂಗಳಯಾನದಲ್ಲಿ ಯಶಸ್ಸನ್ನುಗಳಿಸಿ ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಮೂಲಕ ಭಾರತೀಯ ನೆಲ, ಇಲ್ಲಿನ ಜನರ ಮನ ಹಾಗೂ ಚಂದ್ರನಲ್ಲೂ ತಿರಂಗಾ ಮನೆ ಮಾಡಿದೆ ಎಂದು ಅವರು ಹೇಳಿದ್ದಾರೆ. ಈ ಯಶಸ್ಸು ಭಾರತದ ವೈಜ್ಞಾನಿಕ ಶಂಕನಾದವಾಗಿದೆ. ಚಂದ್ರಯಾನದಿಂದ ಮನುಕುಲ ಅಭಿವೃದ್ಧಿ ಸಾಧ್ಯವಿದೆ. ಹಿಮಾಲಯದಿಂದ ಕನ್ಯಾಕುಮಾರಿವರೆಗೂ ಜೋಡಿಸುವ ಸಾಮರ್ಥ್ಯ ಇದೆ. ಶಿವನಲ್ಲಿ ಮಾನವನ ಅಭಿವೃದ್ಧಿ ಇದೆ. ಚಂದ್ರಯಾನ-3 ರ ಯಶಸ್ಸಿನಿಂದಾಗಿ ಮೇಕ್ ಇನ್ ಇಂಡಿಯಾದ ಮೇಲೆ ಬಲವಾದ ನಂಬಿಕೆ ಮೂಡುತ್ತಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

- Advertisement -

Related news

error: Content is protected !!