


ಬಾಗಲಕೋಟೆ: ಸರ್ಕಾರಿ ಹೆಣ್ಣುಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ನಡೆದ ಗಲಾಟೆಯಿಂದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ. ಸಾವಳಗಿ ಗ್ರಾಮದ ಸುದೀಪ್ ಪಾಂಗೆ(19) ಎಂದು ಗುರುತಿಸಲಾಗಿದೆ.
ಮಾ.11ರ ರಾತ್ರಿ ಸಾವಳಗಿ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸುದೀಪ್ ಶಾಲೆಯ ಮೇಲ್ಮಾವಣಿಯ ಮೇಲೆ ಕುಳಿತುಕೊಂಡು ಕೆಳಗೆ ನಡೆಯುತ್ತಿದ್ದ ಕಾರ್ಯಕ್ರಮದತ್ತ ಕಲ್ಲು ಎಸೆದಿದ್ದಾನೆ ಮತ್ತು ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುವ ಸ್ಥಳದತ್ತ ಇಣುಕಿ ನೋಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.
ಈ ವಿಚಾರವಾಗಿ ಆಕ್ರೋಶಗೊಂಡ ಮೂವರು ಸ್ಥಳೀಯ ಯುವಕರು ಸುದೀಪ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಬಳಿಕ ಸುದೀಪ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಈ ಹಲ್ಲೆಯ ದೃಶ್ಯಗಳು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮೃತನ ಸಹೋದರ ನೀಡಿದ ದೂರಿನ ಆಧಾರದ ಮೇಲೆ, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಹಲ್ಲೆ ಎಸಗಿದ ಮೂವರು ಸ್ಥಳೀಯ ಯುವಕರ ವಿರುದ್ಧ ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








