ಬೆಂಗಳೂರು: ಕಾವಲ್ ಭೈರಸಂದ್ರದಲ್ಲಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮೂರ್ತಿ ಸಂಬಂಧಿಯೋರ್ವ ಫೇಸ್ಬುಕ್ ನಲ್ಲಿ ಮಾಡಿದ್ದ ಪೋಸ್ಟ್ ಗೆ ಸಂಬಂಧಿಸಿ ಕಿಡಿಗೇಡಿಗಳ ತಂಡ ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಪೊಲೀಸ್ ಠಾಣೆ ಮುಂದೆ ದಾಂಧಲೆ ನಡೆಸಲಾಗಿದೆ. ಗಲಭೆ ನಿಯಂತ್ರಣ ಮಾಡಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ನಿನ್ನೆ ತಡ ರಾತ್ರಿ ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಡಿ. ಜೆ. ಹಳ್ಳಿ ಪೊಲೀಸ್ ಠಾಣೆಯ ವಾಹನಗಳನ್ನು ಜಖಂಗೊಳಿಸಲಾಗಿದೆ. ಕೆ. ಜಿ. ಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೂ ಗಲಭೆ ನಡೆಯುತ್ತಿದೆ.
ವಾಹನಗಳನ್ನು ಜಖಂಗೊಳಿಸುತ್ತಾ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಾ, ಕಂಡ ಕಂಡಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚುತ್ತಿದ್ದ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಕೆ. ಜಿ. ಹಳ್ಳಿ ಠಾಣೆ ಸಮೀಪ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಮೂವರ ಕಾಲಿಗೆ ಗುಂಡು ತಗುಲಿದೆ. 10ಕ್ಕೂ ಅಧಿಕ ಪೊಲೀಸರಿಗೆ ಗಲಭೆಯಲ್ಲಿ ಗಾಯಗಳಾಗಿವೆ. ಹಲವಾರು ಪೊಲೀಸರ ವಾಹನಗಳನ್ನು ಜಖಂಗೊಳಿಸಲಾಗಿದೆ.
ಬೆಂಗಳೂರಿನ ಡಿ. ಜೆ. ಹಳ್ಳಿ ಪೊಲೀಸ್ ಠಾಣೆಯ ಮುಂದೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಜನರು ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದಾರೆ.

ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಒಂದು ಸಮುದಾಯದ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಡಿ. ಜೆ. ಹಳ್ಳಿ ಪೊಲೀಸರು ಸ್ಥಳಕ್ಕೆ ಬಂದಿದ್ದರು.
ಉದ್ರಿಕ್ತ ಜನರು ಡಿ. ಜೆ. ಹಳ್ಳಿ ಪೊಲೀಸ್ ಠಾಣೆಯ ಮುಂದೆ ಬಂದು ಗಲಾಟೆ ಆರಂಭಿಸಿದರು. ಪೊಲೀಸ್ ವಾಹನಗಳನ್ನು ಜಖಂಗೊಳಿಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸ್ಥಳಕ್ಕೆ ಬಂದಿದ್ದಾರೆ. ಎಲ್ಲಾ ವಿಭಾಗದ ಡಿಸಿಪಿಗಳಿಗೆ ಸ್ಥಳಕ್ಕೆ ಬರುವಂತೆ ಸೂಚನೆ ನೀಡಲಾಗಿದೆ.
