Tuesday, July 21, 2026
spot_imgspot_img
spot_imgspot_img

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಕಾಶ್ ರಾಜ್ ಬ್ರಾಂಡ್ ಅಂಬಾಸಿಡರ್

- Advertisement -
- Advertisement -

ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFES) ರಾಯಭಾರಿಯಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಚಲನಚಿತ್ರೋತ್ಸವದ ಪೂರ್ವಭಾವಿ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.


17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜ.29ರಿಂದ ಫೆ.6ರವರೆಗೆ ನಡೆಯಲಿದ್ದು, ವಿಧಾನಸೌಧದ ಮುಂಭಾಗದಲ್ಲಿ ಭವ್ಯ ಉದ್ಘಾಟನೆ ನಡೆಯಲಿದೆ. ಈ ಬಾರಿಯ ಚಲನಚಿತ್ರೋತ್ಸವದ ಥೀಮ್ ಮಹಿಳಾ ಸಬಲೀಕರಣವಾಗಿರುತ್ತದೆ. ರಾಜಾಜಿನಗರದ ಲುಲು ಮಾಲ್‌ನ ಸಿನಿಪೊಲಿಸ್‌ನ 11 ಸ್ಕ್ರೀನ್‌ಗಳ ಜೊತೆಗೆ ಡಾ.ರಾಜ್ ಕುಮಾರ್ ಭವನ, ಕಲಾವಿದರ ಸಂಘ, ಚಾಮರಾಜಪೇಟೆ ಹಾಗೂ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಗಳಲ್ಲೂ ಚಿತ್ರಗಳ ಪ್ರದರ್ಶನ ನಡೆಯಲಿದೆ.

ಈ ಬಾರಿ ಏಷಿಯನ್, ಭಾರತೀಯ ಮತ್ತು ಕನ್ನಡ ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇದುವರೆಗೆ 110ಕ್ಕೂ ಹೆಚ್ಚು ಚಿತ್ರಗಳು ಸಲ್ಲಿಕೆಯಾಗಿವೆ. ಡಿಸೆಂಬರ್ 31 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ.


ಕನ್ನಡ ಹಾಗೂ ಭಾರತೀಯ ಚಿತ್ರಗಳನ್ನು ಒಳಗೊಂಡಂತೆ 60ಕ್ಕೂ ಹೆಚ್ಚು ದೇಶಗಳ 200ಕ್ಕೂ ಅಧಿಕ ಚಲನಚಿತ್ರಗಳು, 400ಕ್ಕೂ ಹೆಚ್ಚು ಪ್ರದರ್ಶನಗಳೊಂದಿಗೆ ಚಿತ್ರೋತ್ಸವ ನಡೆಯಲಿದೆ. ಕಾನ್ಸ್, ಬರ್ಲಿನ್, ವೆನಿಸ್, ಟೊರಂಟೋ ಸೇರಿದಂತೆ ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದ ಹಾಗೂ ಆಸ್ಕರ್ ಶಾರ್ಟ್‌ಲಿಸ್ಟ್ ಆಗಿರುವ ಹಲವು ಚಿತ್ರಗಳು ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿವೆ.
ಚಿತ್ರೋತ್ಸವಕ್ಕೆ 2025–26 ಸಾಲಿನಲ್ಲಿ ರೂ.7 ಕೋಟಿ ಅನುದಾನ ಒದಗಿಸಲಾಗಿದ್ದು, ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರಗಳಿಗೆ ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

- Advertisement -

Related news

error: Content is protected !!