ಸಕಲೇಶಪುರ: ಬ್ಯಾಂಕ್‌ಗಳು ಗ್ರಾಹಕರಿಂದ ಸಣ್ಣ ಮೊತ್ತಗಳಿಗೂ ಪೈಸೆಗೆ ಪೈಸೆ ಲೆಕ್ಕ ಹಾಕಿ ಹಣ ವಸೂಲಿಸುವುದು ಸಾಮಾನ್ಯ. ಆದರೆ ಅದೇ ಬ್ಯಾಂಕ್ ಗ್ರಾಹಕರಿಗೆ ಬಾಕಿ ಇರುವ ಹಣವನ್ನು ನೀಡಲು ಹಿಂದೇಟು ಹಾಕಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದ್ದು, ರೈತನ ಹಠದ ಮುಂದೆ ಕೊನೆಗೂ ಬ್ಯಾಂಕ್ 66 ಪೈಸೆ ಜಮಾ ಮಾಡಿರುವ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ ಅವರು ಕೆಲವು ವರ್ಷಗಳ ಹಿಂದೆ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಿಂದ ₹50,000 ಸಾಲ ಪಡೆದಿದ್ದರು. ಬಳಿಕ ಅವರು ಸಾಲವನ್ನು ಸಂಪೂರ್ಣವಾಗಿ ತೀರಿಸಿದ್ದರೂ, ಬ್ಯಾಂಕ್ ದಾಖಲೆಗಳಲ್ಲಿ ಇನ್ನೂ ₹9.34 ಬಾಕಿ ಇದೆ ಎಂದು ಸೂಚಿಸಿ ತಕ್ಷಣ ಪಾವತಿಸುವಂತೆ ನೋಟಿಸ್ ಕಳುಹಿಸಲಾಗಿತ್ತು. ಇದಲ್ಲದೆ ಬ್ಯಾಂಕ್ ಸಿಬ್ಬಂದಿಯಿಂದ ಪದೇಪದೇ ದೂರವಾಣಿ ಕರೆಗಳೂ ಬರುತ್ತಿದ್ದವು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಬೇಸತ್ತ ರೈತ ಚೊಕ್ಕಣ್ಣಗೌಡ ಅವರು ಬ್ಯಾಂಕ್‌ಗೆ ತೆರಳಿ ₹10 ನೀಡಿ ಸಾಲ ಖಾತೆಗೆ ಜಮಾ ಮಾಡಿದರು. ನಂತರ ಉಳಿದಿರುವ ₹0.66 (66 ಪೈಸೆ) ಹಣವನ್ನು ವಾಪಸ್ ನೀಡುವಂತೆ ಕ್ಯಾಷಿಯರ್‌ಗೆ ಮನವಿ ಮಾಡಿದರು. ಆದರೆ “ಚಿಲ್ಲರೆ ಇಲ್ಲ” ಎಂಬ ಕಾರಣ ನೀಡಿ ಬ್ಯಾಂಕ್ ಸಿಬ್ಬಂದಿ ಹಣ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರಿಂದ ಅಲ್ಲೇ ಮಾತಿನ ಚಕಮಕಿ ನಡೆದಿತ್ತು.ಈ ವೇಳೆ ರೈತ, “ನಮ್ಮಿಂದ ಹಣ ವಸೂಲಿಸುವಾಗ ಪೈಸೆಗೆ ಪೈಸೆ ಲೆಕ್ಕ ಹಾಕುತ್ತೀರಾ; ಹಾಗಾದರೆ ನಮಗೂ ಬಾಕಿ ಇರುವ ಹಣವನ್ನು ನೀಡಲೇಬೇಕು” ಎಂದು ಪಟ್ಟು ಹಿಡಿದಿದ್ದರು.

ರೈತನ ನಿಲುವಿಗೆ ಬ್ಯಾಂಕ್ ಸಿಬ್ಬಂದಿಯೊಂದಿಗೆ ಕೆಲ ಹೊತ್ತು ವಾಗ್ವಾದವೂ ನಡೆದಿದೆ ಎನ್ನಲಾಗಿದೆ. ಬಳಿಕ ಬ್ಯಾಂಕ್ ವ್ಯವಸ್ಥಾಪಕರು ಮಧ್ಯಪ್ರವೇಶಿಸಿ ರೈತನಿಗೆ ಕ್ಷಮೆ ಕೇಳಿ ವಿಚಾರವನ್ನು ತಾತ್ಕಾಲಿಕವಾಗಿ ಸಮಾಧಾನಪಡಿಸಿದ್ದರು.ಈ ಘಟನೆ ಮೇಲಧಿಕಾರಿಗಳ ಗಮನಕ್ಕೆ ಬಂದ ಬಳಿಕ ಬ್ಯಾಂಕ್ ಅಧಿಕಾರಿಗಳು ಕೊನೆಗೂ ರೈತನ ಖಾತೆಗೆ 66 ಪೈಸೆ ಜಮಾ ಮಾಡಿ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಿದರು.ಸಣ್ಣ ಮೊತ್ತವಾದರೂ ತನ್ನ ಹಕ್ಕಿನ ಹಣವನ್ನು ಪಡೆಯಲು ರೈತ ತೋರಿದ ಹಠ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, “ಗ್ರಾಹಕರೊಂದಿಗೆ ಬ್ಯಾಂಕ್‌ಗಳು ಸಮಾನ ನ್ಯಾಯ ಪಾಲಿಸಬೇಕು” ಎಂಬ ಮಾತುಗಳು ಕೇಳಿಬರುತ್ತಿವೆ.
ಹಲವರು ಇದನ್ನು ಸಾಮಾನ್ಯ ನಾಗರಿಕನ ಹಕ್ಕಿಗಾಗಿ ನಡೆದ ಸಣ್ಣ ಆದರೆ ಮಹತ್ವದ ಹೋರಾಟವೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.








