


ಬಂಟ್ವಾಳ: ಬಾಳ್ತಿಲ ಗ್ರಾಮದ ಕಾಂಪ್ರಬೈಲು ಎಂಬಲ್ಲಿ ಮನೆಮಂದಿ ಜಾತ್ರೆಗೆ ತೆರಳಿದ್ದ ವೇಳೆ ಸುಮಾರು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ನಡೆದಿದೆ. ಸುಮಾರು 9 ಪವನ್ ಚಿನ್ನವನ್ನು ಕಳ್ಳರು ಕದ್ದಿದ್ದಾರೆ ಎನ್ನಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮನೆ ಮಾಲಕ ಸತೀಶ್ ಶೆಣೈ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಫೆ.4ರಂದು ಕಶೇಕೋಡಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಜಾತ್ರೋತ್ಸವ ಇದ್ದುದ್ದರಿಂದ ಪತ್ನಿಯೊಂದಿಗೆ ಮನೆಗೆ ಬೀಗ ಹಾಕಿ ಸಂಜೆ 6.45 ಕ್ಕೆ ಮನೆಯಿಂದ ಕಶೆಕೋಡಿಗೆ ಹೊರಟು ಉತ್ಸವ ಮುಗಿಸಿ ಮನೆಗೆ ಬಂದಾಗ ರಾತ್ರಿ ಸುಮಾರು 10.30 ಆಗಿತ್ತು. ಈ ವೇಳೆ ಮನೆಯ ಹಿಂಬದಿಯ ಬಾಗಿಲು ತೆರೆದಿರುವುದನ್ನು ನೋಡಿದಾಗ ಕಳ್ಳರು ಯಾವುದೋ ಸಾಧನದಿಂದ ಬಾಗಿಲಿನ ಚಿಲಕ ತುಂಡಾಗಿ ಬಿದ್ದಿರುವುದು ಕಂಡುಬಂದಿದೆ.
ಒಳಗೆ ಬಂದು ಕೋಣೆಯಲ್ಲಿದ್ದ ಕಪಾಟನ್ನು ಯಾವುದೋ ಸಾಧನದಿಂದ ತೆರೆದಿದ್ದು ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು ಕಂಡುಬಂದಿದೆ. ಕಪಾಟಿನ ಲಾಕರ್ ನಲ್ಲಿದ್ದ ಸ್ಟೀಲ್ ಡಬ್ಬಿಗಳು ಮಂಚದಲ್ಲಿ ತೆರೆದಿದ್ದು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಸುಮಾರು 5 ಪವನ್ ತೂಕದ ಒಂದು ಹವಳದ ಮಾಲೆ, ಎರಡೂವರೆ ಪವನ್ ತೂಕದ ಒಂದು ಮುತ್ತಿನ ಸರ, ಒಂದೂವರೆ ಪವನ್ ತೂಕದ ಬೆಂಡೋಲೆ, ಜುಂಕಿ, 5000 ರೂ ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








