



ಬಂಟ್ವಾಳ: ಜವುಳಿ ಅಂಗಡಿಗೆ ಬುರ್ಖಾ ಧರಿಸಿ ಗ್ರಾಹಕರ ಸೊಗಿನಲ್ಲಿ ಬಂದ ಪತ್ನಿ ಪತಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಬಿ.ಸಿ ರೋಡಿನಲ್ಲಿ ನಡೆದಿದೆ.
ಸೋಮಯಾಜಿ ಟೆಕ್ಸ್ ಟೈಲ್ಸ್ ಮಳಿಗೆಯ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಹಲ್ಲೆಯಿಂದ ಗಾಯಗೊಂಡವರು. ಅವರ ಪತ್ನಿ ಜ್ಯೋತಿ ಕೆ ಟಿ ಹಲ್ಲೆ ನಡೆಸಿದ ಆರೋಪಿ. ಗಾಯಾಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿ.ಸಿ ರೋಡಿನಲ್ಲಿ ಸೋಮಯಾಜಿ ಟೆಕ್ಸ್ ಟೈಲ್ಸ್ ಮಳಿಗೆಯ ಮಾಲಕ ಕೃಷ್ಣ ಕುಮಾರ್ ಸೋಮಯಾಜಿಯವರು ಅಂಗಡಿಯಲ್ಲಿದ್ದ ವೇಳೆ ಬುರ್ಖಾ ಧರಿಸಿ ಗ್ರಾಹಕರ ಸೊಗಿನಲ್ಲಿ ಬಂದ ಓರ್ವ ಹೆಂಗಸು ಕೃಷ್ಣ ಕುಮಾರ್ ಸೋಮಯಾಜಿಯವರಿಗೆ ಕತ್ತಿಯಿಂದ ಹಲ್ಲೆ ನಡೆಸಿರುತ್ತಾರೆ. ಈ ವೇಳೆ ಅಲ್ಲಿಂದ ಓಡಿದ ಕೃಷ್ಣ ಕುಮಾರ್ ಸೋಮಯಾಜಿಯವರನ್ನು ಅಟೋ ರಿಕ್ಷಾವೊಂದರಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆತಂದು ಅಲ್ಲಿ ಚಿಕಿತ್ಸೆ ಕೊಡಿಸಿದ್ದು, ಪ್ರಸ್ತುತ ಗಾಯಾಳು ಮಂಗಳೂರಿನ ಎ.ಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದು, ಪ್ರಾಣಾಪಾಯದಿಂದ ಪಾರಾಗಿರುತ್ತಾರೆ.
ಹಲ್ಲೆ ನಡೆಸಿದ ಮಹಿಳೆ ಕೃಷ್ಣ ಕುಮಾರ್ ಸೋಮಯಾಜಿರವರ ಪತ್ನಿ ಜ್ಯೋತಿ ಕೆ.ಟಿ ರವರಾಗಿದ್ದು, ಅಪಾದಿತೆ ಈ ಹಿಂದೆ ಕೂಡಾ ಅಂಗಡಿಗೆ ಬಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಕೃಷ್ಣ ಕುಮಾರ್ ಸೋಮಯಾಜಿ ಮತ್ತು ಅವರ ಪತ್ನಿ ಜ್ಯೋತಿ ಕೆ.ಟಿ. ರವರ ಮಧ್ಯೆ ಕೌಟುಂಬಿಕ ವಿಚಾರದಲ್ಲಿ ಮನಸ್ತಾಪವಿದ್ದು, ಇದೇ ದ್ವೇಷದಿಂದ ಕೃಷ್ಣ ಕುಮಾರ್ ಸೋಮಯಾಜಿಯವರನ್ನು ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 131/2025, ಕಲಂ: 118(1), 118(2), 351(3), 109 ಬಿ.ಎನ್.ಎಸ್-2023, U/s: 2(1), (C), 27 Indian Arms act-1959 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








