ಬಂಟ್ವಾಳ: ಬಂಟ್ವಾಳ ಉಳಿ ಗ್ರಾಮದ ಮಣಿನಾಲ್ಕೂರು- ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಆಟೋದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಪೊಲೀಸರು ಆರೋಪಿಯನ್ನು ವಾಹನ ಸಮೇತ ಬಂಧಿಸಿ ಮನೆ ಹಾಗೂ ಜಾನುವಾರು ಕೊಟ್ಟಿಗೆ ಸೇರಿದಂತೆ ಆವರಣವನ್ನು ಜಪ್ತಿ ಮಾಡಲಾಗಿದೆ.

ಡಿ.13ರಂದು ಸಂಜೆ, ಬಂಟ್ವಾಳ ಉಳಿ ಗ್ರಾಮದ ಮಣಿನಾಲ್ಕೂರು- ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಆಟೋದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳೊಂದಿಗೆ ತಪಾಸಣೆಗಿಳಿದ ವೇಳೆ, KA-70-8686 ನೇ ನೊಂದಣಿಯ ಗೂಡ್ಸ್ ಆಟೋದಲ್ಲಿ ಒಂದು ಜಾನುವಾರನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡು ಬಂದಿರುತ್ತದೆ.
ವಾಹನದ ಚಾಲಕನನ್ನು ಈ ಬಗ್ಗೆ ವಿಚಾರಿಸಿದಾಗ, ಆತನು ಬಂಟ್ವಾಳ ಮಣಿನಾಲ್ಕೂರು ಗ್ರಾಮದ ನಿವಾಸಿ ಶ್ರೀಧರ ಪೂಜಾರಿ(56) ಎಂಬುದಾಗಿ ತಿಳಿಸಿದ್ದಾರೆ, ಗೋಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಜಾನುವಾರನ್ನು ಬಂಟ್ವಾಳ ಸರಪ್ಪಾಡಿಯ ಭೋಜ ಮೂಲ್ಯ ಎಂಬವರ ಮನೆಯಿಂದ ಯಾವುದೇ ದಾಖಲಾತಿ ಪರವಾನಿಗೆ ಸಾಗಾಟ ಮಾಡಿರುವುದು ಎಂದು ತಿಳಿದು ಬಂದಿದೆ.
ಸದ್ರಿ ಜಾನುವಾರು, ಆಟೋ ಹಾಗೂ ಒಂದು ಮೊಬೈಲ್ ಫೋನ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ85/2025, ಕಲಂ: ಕಲಂ: 5, 7, 12 ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020 ಮತ್ತು ಕಲಂ: 11(1)(ಡಿ) ಪ್ರಾಣಿ ಹಿಂಸೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಮತ್ತು ಆರೋಪಿತ ಭೋಜ ಮೂಲ್ಯ ರವರ ಮನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾನುವಾರು ಕೊಟ್ಟಿಗೆ ಸೇರಿದಂತೆ ಆವರಣವನ್ನು ಕಾನೂನು ಪ್ರಕ್ರಿಯೆಯಂತೆ ಜಪ್ತಿ ಮಾಡಲಾಗಿರುತ್ತದೆ ಎಂದು ತಿಳಿದು ಬಂದಿದೆ.








