Thursday, February 2, 2023
spot_imgspot_img
spot_imgspot_img

ಬಂಟ್ವಾಳ: ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಮನೆ ದರೋಡೆ

- Advertisement -G L Acharya G L Acharya
- Advertisement -

ಬಂಟ್ವಾಳ: ಒಬ್ಬಂಟಿಯಾಗಿ ಮನೆಯಲ್ಲಿದ್ದ ವೇಳೆ ಮಹಿಳೆಯೊರ್ವಳನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ ಬಳಿಕ ಮನೆ ದರೋಡೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಡೆಕಾನ ಎಂಬಲ್ಲಿ ಡಿ.22 ರಂದು ಗುರುವಾರ ಸಂಜೆ ನಡೆದಿದೆ.

ಬರಿಮಾರು ಗ್ರಾಮದ ಕಡೆಕನ ನಿವಾಸಿ ರೋಹಿತ್ ಎಂಬವರ ಪತ್ನಿ ಪವಿತ್ರ ಎಂಬಾಕೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಮನೆಯಿಂದ ರಾಬರಿ ಮಾಡಲಾಗಿದೆ ಎಂಬ ದೂರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಓರ್ವ ಮುಸುಕು ಹಾಕಿದರೆ ಇನ್ನೊರ್ವ ವ್ಯಕ್ತಿ ಮಾಸ್ಕ್ ಹಾಕಿದ್ದ ವ್ಯಕ್ತಿಗಳು ದರೋಡೆ ಮಾಡಿದ್ದಾರೆ ಎಂದು ಪವಿತ್ರ ತಿಳಿಸಿದ್ದಾರೆ. ಮನೆಯೊಳಗೆ ನುಗ್ಗಿ ನಗದು ಹಣ ಹಾಗೂ ಅಡಿಕೆ ಕಳವು ಮಾಡಿದ್ದಾರೆ.

ರೋಹಿತ್ ಕುಮಾರ್ ಅವರು ಐಸ್ ಕ್ರೀಂ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಪತ್ನಿ ಪವಿತ್ರ ಮನೆಯಲ್ಲಿರುತ್ತಿದ್ದರು. ಇವರ ಜೊತೆಗೆ ರೋಹಿತ್ ಅವರ ಇಬ್ಬರು ಮಕ್ಕಳು ಮನೆಯಲ್ಲಿದ್ದಾರೆ. ಗುರುವಾರ ಮಕ್ಕಳಿಬ್ಬರು ಮೂಡಬಿದಿರೆಯಲ್ಲಿ ನಡೆಯುವ ಜಾಂಬೂರಿ ಕಾರ್ಯಕ್ರಮಕ್ಕೆ ತೆರಳಿದರೆ, ಗಂಡ ಕೆಲಸಕ್ಕೆ ಹೋಗಿದ್ದರು. ಸಂಜೆ ಸುಮಾರು 6.30 ರ ವೇಳೆ ಪವಿತ್ರ ಅವರು ಮನೆಯ ಬಾತ್ ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮನೆಯ ಮಾಡಿಗೆ ಕಲ್ಲು ಹೊಡೆದ ಶಬ್ದವಾಯಿತು, ಆ ಬಳಿಕ ಮನೆಯ ಕಿಟಕಿ ಬಾಗಿಲಿನ ಗಾಜುಗೆ ಕಲ್ಲು ಎಸೆಯಲಾಗಿತ್ತು .

ಸ್ನಾನ ಮಾಡಿ ಹೊರ ಬಂದು ನೋಡಿದಾಗ ಯಾರು ಕಾಣಲಿಲ್ಲ, ಯಾರು ಇಲ್ಲ ಅಂತ ವಾಪಾಸು ಬಾತ್ ರೂಮ್ ನ ಬಾಗಿಲು ಹಾಕಲು ಬರುವ ವೇಳೆ ಇಬ್ಬರು ಮುಸುಕುದಾರಿ ಅಪರಿಚಿತ ವ್ಯಕ್ತಿಗಳು ಏಕಾಏಕಿ ಪವಿತ್ರ ಅವರನ್ನು ಎಳೆದುಕೊಂಡು ಹೋಗಿ ಮನೆಯ ಆಂಗಳದಲ್ಲಿದ್ದ ಅಡಿಕೆ ಮರದ ಕಂಬಕ್ಕೆ ನೈಲಾನ್ ಹಗ್ಗದಿಂದ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಆ ಬಳಿಕ ಕುತ್ತಿಗೆಯಲ್ಲಿದ್ದ ಕರಿಮಣಿಸರ ಕಾಣೆಯಾಗಿದೆ. ಮನೆಯೊಳಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಟೇಬಲ್ ಮೇಲೆ ಇದ್ದ ನಗದು 4 ಸಾವಿರ ಹಾಗೂ ಅಂಗಳದಲ್ಲಿದ್ದ ಅಡಿಕೆಗೋಣಿಯನ್ನು ಕೊಂಡುಹೋಗಿದ್ದಾರೆ, ಮತ್ತು ಕಪಾಟು ಒಳಗೆ ಜಾಲಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪವಿತ್ರ ಅವರನ್ನು ಕಟ್ಟಿ ಹಾಕಿದ ಬಗ್ಗೆ ಯಾರು ಕೂಡ ಗಮನಿಸಿಲ್ಲ, ಸುಮಾರು 7 ಅಂದಾಜಿಗೆ ಮನೆಯ ಸಮೀಪದ ಮನೆಯವರು ನೋಡಿ ಕಟ್ಟಿ ಹಾಕಿದನ್ನು ಬಿಚ್ಚಿದ ಬಳಿಕ ಘಟನೆಯ ಬಗ್ಗೆ ತಿಳಿದಿದೆ. ಹಿಂ.ಜಾ.ವೇ ಮುಖಂಡ ನರಸಿಂಹ ಶೆಟ್ಟಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೋಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್. ಐ.ಹರೀಶ್ ಭೇಟಿ ನೀಡಿದ್ದಾರೆ. ಇಂದು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸುವ ಬಗ್ಗೆ ಎಸ್.ಐ.ಹರೀಶ್ ‌ಮಾಹಿತಿ ನೀಡಿದ್ದಾರೆ.


- Advertisement -

Related news

error: Content is protected !!