Saturday, May 4, 2024
spot_imgspot_img
spot_imgspot_img

ಬಾರ್ಯ: (ಎ.12 ರಿಂದ 14) ಸಾವಿರ ವರುಷಗಳ ಇತಿಹಾಸವಿರುವ ಬಾರ್ಯಗುತ್ತು ತರವಾಡು ಧರ್ಮಚಾವಡಿಯಲ್ಲಿ ಧರ್ಮನೇಮೋತ್ಸವ

- Advertisement -G L Acharya panikkar
- Advertisement -

ಬಾರ್ಯಗುತ್ತು ತರವಾಡು ಧರ್ಮಚಾವಡಿಯಲ್ಲಿ ಎಪ್ರಿಲ್‌ 12 ರಿಂದ 14 ರವರೆಗೆ ಧರ್ಮನೇಮೋತ್ಸವ ನಡೆಯಲಿದೆ.

ಬಾರ್ಯಗುತ್ತು ತರವಾಡು ಧರ್ಮಚಾವಡಿಯ ಇತಿಹಾಸ. ತುಳುನಾಡು ಎಂದರೆ ದೈವದೇವರುಗಳ ನೆಲೆಬೀಡು. ಇಲ್ಲಿ ದೈವಗಳೇ ಪ್ರಧಾನ ಸ್ಥಾನದಲ್ಲಿ ನಿಂತು ನಂಬಿದ ಜನರನ್ನು ಸಲಹುವ ಮೂಲಕ ತುಳುನಾಡಿನ ಆಚಾರ ವಿಚಾರ ನಂಬಿಕೆಯನ್ನು ಎತ್ತಿಹಿಡಿದಿದೆ. ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದಲ್ಲಿರುವ ಬಾರ್ಯಗುತ್ತು ಮನೆತನ ಸಾಕಷ್ಟು ಪೌರಾಣಿಕ ವಿಶೇಷತೆಯನ್ನು ಒಳಗೊಂಡಿದೆ. ಅನಾದಿಕಾಲದಿಂದಲೇ ತನ್ನದೇ ಆದ ವೈಶಿಷ್ಟ್ಯ ಗೌರವದೊಂದಿಗೆ ಹೆಸರುವಾಸಿಯಾದ ಪುರಾತನ ಬಿಲ್ಲವ (ಸಾಲ್ಯಾನ್) ಗುತ್ತಿನ ಮನೆತನ ಗಳಲ್ಲಿ ಒಂದಾಗಿದೆ.

ದ ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾರ್ಯಗ್ರಾಮದ ಬಾರ್ಯಗುತ್ತು ಸಾವಿರ ವರುಷಗಳ ಇತಿಹಾಸವಿರುವ ತರವಾಡು ಮನೆತನ. ಸುಳ್ಳಮಲೆ ದೈವ( ಅರದೆರೆ ಪಂಜುರ್ಲಿ) ಬಾರ್ಯಗುತ್ತುವಿಗೆ ಬಂದು ಬಾರ್ಯಗುತ್ತುವಿನಲ್ಲಿ ಪ್ರಧಾನ ದೈವವಾಗಿ ನೆಲೆನಿಂತು ಬಳಿಕ ಬಾರ್ಯದ ಗ್ರಾಮ ದೈವವಾಗಿ ಗ್ರಾಮಸ್ಥರನ್ನು ಸಲಹುತ್ತಿದೆ.ದೈವವು ಬಾರ್ಯ ಗುತ್ತಿಗೆ ಬಂದು ಶಿಲೆಯ ಮೇಲೆ ಮಂಡಿ ಊರಿ ತನ್ನ ಅಸ್ತಿತ್ವವನ್ನು ಪ್ರಕಟಿಸಿದ ಕುರುಹನ್ನು ನಾವು ಇಂದೂ ಕಾಣಬಹುದು.ಬಾರ್ಯದ ಗುತ್ತಿನ ಮನೆ ಸುತ್ತುಪೌಳಿಯ ತರವಾಡು ಮನೆಯಾಗಿತ್ತು. ಕಳೆದ 22 ವರ್ಷಗಳ ಹಿಂದೆ ದಿ. ಪಟ್ಲಕೆರೆ ನಾರಾಯಾಣ ಶಾಂತಿ ಇವರ ನೇತೃತ್ವದಲ್ಲಿ ಇಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ನಂತರದ ದಿನಗಳಲ್ಲಿ ಇಲ್ಲಿ ವರ್ಷಕ್ಕೊಮ್ಮೆ ದೈವಗಳಿಗೆ ಪಂಚಪರ್ವ, ತಂಬಿಲ ಸೇವೆ,ನಾಗಬನದಲ್ಲಿ ತನು ತಂಬಿಲಾದಿ ಸೇವೆಗಳನ್ನು ಮತ್ತು ಪ್ರತೀ ಸಂಕ್ರಮಣದಂದು ಕುಟುಂಬದ ಕಲ್ಲುರ್ಟಿ ದೈವಕ್ಕೆ ಆಗೆಲು ಸೇವೆಗಳನ್ನುನಡೆಸುತ್ತಾ ಬರಲಾಗುತ್ತಿದ್ದು ಇದೀಗ ಹಲವಾರು ವರ್ಷಗಳ ನಂತರ ಹಿರಿಯರು ಅನಾದಿಕಾಲದಿಂದಲೂ ಆರಾಧಿಸಿಕೊಂಡು ಬಂದಿರುವ ಸ್ಥಳದ ದೈವಗಳಿಗೆ, ಕುಟುಂಬದ ದೈವಗಳಿಗೆ ಹಾಗೂ ಬಾರ್ಯಗುತ್ತುವಿನ ಧರ್ಮದೈವ ಪಂಜುರ್ಲಿಗೆ ಧರ್ಮಚಾವಡಿಯಲ್ಲಿ ಧರ್ಮನೇಮೋತ್ಸವದ ಶುಭಗಳಿಗೆಗೆ ಸಜ್ಜಾಗಿ ನಿಂತಿದೆ.

ಎ. 12 ನೇ ಶುಕ್ರವಾರ ಗಣಪತಿಹವನ, ನವ ಕಲಶ, ಶುದ್ಧ ಕಲಶ, ನೂತನ ಮಂಟಪದಲ್ಲಿ ಬಾರ್ಯಗುತ್ತು ಗ್ರಾಮದೈವ ಪಂಜುರ್ಲಿಯ ಪುನಃ ಪ್ರತಿಷ್ಠೆ, ನೂತನ ಮೊಗ, ಕಡ್ಸಲೆ ಅರ್ಪಣೆ, ಬಳಿಕ ಬೆಳಗ್ಗೆ 10 ಗಂಟೆಗೆ ದೈವಗಳ ಭಂಡಾರ ಇಳಿದು ಆಯಾಯ ಸ್ಥಾನಗಳಲ್ಲಿ ಪಂಚಪರ್ವ ಸೇವೆ, ಮಧ್ಯಾಹ್ನ 12 ಗಂಟೆಗೆ ಪಲ್ಲಪೂಜೆ, ಅನ್ನಸಂತರ್ಪಣೆ, ಮಧ್ಯಾಹ್ನ 3 ಗಂಟೆಗೆ ದೈವಗಳ ಭಂಡಾರ ಇಳಿಯುವುದು. ಸಂಜೆ 4 ಕ್ಕೆ ಮೂಲಮಹಿಸಂತಾಯ ನೇಮ, ಸಂಜೆ 7 ಕ್ಕೆ ಶ್ರೀ ದೈವೊಂಕುಲು ನೇಮ, ರಾತ್ರಿ 8 ಗಂಟೆಗೆ ಶ್ರೀ ರಕ್ತೇಶ್ವರಿ ದೈವ ದ ನೇಮ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10 ಗಂಟೆಗೆ ಪಿಲಿಚಾಮುಂಡಿ ದೈವ ದ ನೇಮ ನಡೆಯಲಿದೆ.

ಎ. 13 ರಂದು ಸಂಜೆ 4 ಗಂಟೆಗೆ ಭಂಡಾರ ಇಳಿಯುವುದು, ಸಂಜೆ 6 ಗಂಟೆಗೆ ಚಾವಡಿಯ ಹಿರಿಯಾಯನ ನೇಮ, ರಾತ್ರಿ 7.30 ಕ್ಕೆ ಬಾರ್ಯಗುತ್ತು ಗ್ರಾಮ ದೈವ ಪಂಜುರ್ಲಿಗೆ ದರಿದೀಪದ ಧರ್ಮನೇಮ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ರಾತ್ರಿ 12 ಗಂಟೆಗೆ ಕುಟುಂಬದ ಪ್ರಧಾನ ಕಲ್ಲುರ್ಟಿ ನೇಮ ನಡೆಯಲಿದೆ. ಆನಂತರ ಪ್ರಾತಃ ಕಾಲದಲ್ಲಿ 3.30 ಕ್ಕೆ *ಕಲ್ಕುಡ ಮತ್ತು ಕಲ್ಲುರ್ಟಿ ದೈವ ಗಳ ನೇಮವು ನಡೆಯಲಿರುವುದು.

ಎ. 14 ರಂದು ಸಂಜೆ 4 ಗಂಟೆಗೆ ಭಂಡಾರ ಇಳಿಯುವುದು, ಬಳಿಕ ಸಂಜೆ 5 ಗಂಟೆಗೆ ವರ್ಣರಪಂಜುರ್ಲಿ ನೇಮ, ರಾತ್ರಿ 7 ಗಂಟೆಗೆ ಜಾವದೆ ನೇಮ, ರಾತ್ರಿ 9 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ರಾತ್ರಿ 10 ಗಂಟೆಗೆ ಕುಪ್ಪೆಟ್ಟಿ ಹಿರಿಯಾಯನ ನೇಮ, ಕುಪ್ಪೆಟ್ಟಿಪಂಜುರ್ಲಿ ಹಾಗೂ ಕುಪ್ಪೆಟ್ಟಿ ಕಲ್ಲುರ್ಟಿ ನೇಮ ನಡೆಯಲಿದೆ. ರಾತ್ರಿ 1.00 ಗಂಟೆಗೆ ಕ್ಷೇತ್ರ ಗುಳಿಗ ಮತ್ತು ಮುಗೇರ ಗುಳಿಗ ದೈವ ಗಳಿಗೆ ನೇಮ ನಡೆಯಲಿದೆ. ಈ ಎಲ್ಲಾ ಧರ್ಮಕಾರ್ಯಗಳಿಗೆ ಆಗಮಿಸಿ ಧರ್ಮ ಬೂಳ್ಯವನ್ನು ಸ್ವೀಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಬಾರ್ಯ ಗುತ್ತು ಕುಟುಂಬಸ್ಥರು ಹಾಗೂ ಸ್ಥಳ ದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!