Saturday, April 27, 2024
spot_imgspot_img
spot_imgspot_img

ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಮೆಡಿಕಲ್ ಮಾಫಿಯಾದ ಕರಾಳತೆ ನಿರಂತರವಾಗಿ ಮುಂದುವರೆಯುತ್ತಿದ್ದರೂ ಸರಕಾರ ಮೌನವೇಕೆ?

- Advertisement -G L Acharya panikkar
- Advertisement -

ಚಿಕಿತ್ಸೆಯ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿರುವ ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಮೇಲೆ ಸರಕಾರ ತನ್ನ ಹಿಡಿತ ಬಿಗಿಗೊಳಿಸಬೇಕು :SDPI

ಮಂಗಳೂರು: ದೇಶದಲ್ಲೇ ಶಿಕ್ಷಣ ಕಾಶಿ ಮತ್ತು ಮೆಡಿಕಲ್ ಹಬ್ ಎಂಬ ಹೆಸರಿನಿಂದ ಕರೆಯಲ್ಪಡುವ ಮಂಗಳೂರಿನಲ್ಲಿ ಶಿಕ್ಷಣ ಮತ್ತು ಚಿಕಿತ್ಸೆಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜು ಆಡಳಿತ ಜನಸಾಮಾನ್ಯರ ಅಮೂಲ್ಯವಾದ ಜೀವ ದೊಂದಿಗೆ ಚೆಲ್ಲಾಟ ವಾಡುತ್ತಿದೆ. ನೆರೆಯ ರಾಜ್ಯ ಮತ್ತು ಜಿಲ್ಲೆ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ವಿಧ್ಯಾರ್ಥಿಗಳು ಸೇರಿದಂತೆ ಚಿಕಿತ್ಸೆಗೆ ಮಂಗಳೂರನ್ನು ಆಶ್ರಯಿಸುವವರ ಸಂಖ್ಯೆ ಬಹಳ ದೊಡ್ಡದಿದೆ. ಇದನ್ನೆ ಬಂಡವಾಳ ವಾಗಿಸಿದ ಇಲ್ಲಿನ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜು ಆಡಳಿತ ಚಿಕಿತ್ಸೆಯ ಹೆಸರಿನಲ್ಲಿ ದುಬಾರಿ ಹಣ ವಸೂಲಿ ಮಾಡುವುದು ಸೇರಿದಂತೆ ಸಮರ್ಪಕ ಚಿಕಿತ್ಸೆ ಮಾಡದೆ ಜನ ಸಾಮಾನ್ಯರ ಅಮೂಲ್ಯ ಜೀವದೊಂದಿಗೆ ಚೆಲ್ಲಾಟ ಮಾಡುತ್ತಿರುವ ಮಂಗಳೂರಿನ ಮೆಡಿಕಲ್ ಮಾಫಿಯಾದ ಕರಾಳ ಮುಖವನ್ನು ನಿರಂತರವಾಗಿ ಅನಾವರಣ ಗೊಳಿಸುತ್ತಿದೆ ಆದರೂ ಸರಕಾರಗಳು ಮೌನವಾಗಿ ಕುಳಿತಿರುವುದು ಯಾಕೆ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.

ದೇಶದ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಆರೋಗ್ಯ ಮತ್ತು ಶಿಕ್ಷಣ ಖಾಸಗೀಕರಣ ಗೊಳಿಸಬಾರದು, ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಕಲ್ಪಿಸುವುದು ಸರಕಾರದ ಜವಾಬ್ದಾರಿಯಾಗಿದೆ ಆದರೆ ಇಂದು ಬಂಡವಾಳ ಶಾಹಿಗಳಿಗೆ, ಲಿಕ್ಕರ್ ಉದ್ಯಮಿಗಳಿಗೆ ಮತ್ತು ಶ್ರೀಮಂತರಿಗೆ,ಹಲವು ಉನ್ನತ ಮಟ್ಟದ ರಾಜಕಾರಣಿಗಳಿಗೆ ಬೆನಾಮಿ ಹೆಸರಿನಲ್ಲಿ ವ್ಯವಹಾರ ನಡೆಸಲು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವು ದೊಡ್ಡ ಲಾಭದಾಯಕ ಉದ್ಯಮವಾಗಿ ಬದಲಾಗಿವೆ. ಮಂಗಳೂರಿನಲ್ಲಿ ಇರುವ ಎಲ್ಲಾ ಮೆಡಿಕಲ್ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳು ಇದರಿಂದ ಹೊರತಾಗಿಲ್ಲ. ಕಾಲೇಜುಗಳಲ್ಲಿ ಸೀಟು ಪಡೆಯಲು ಕೋಟಿಗಟ್ಟಲೆ ಡೊನೇಶನ್ ನೀಡಿ ಸೀಟು ಪಡೆಯುವ ವಿಧ್ಯಾರ್ಥಿಗಳು ನಂತರ ವೈದ್ಯರಾಗಿ ಬಂದು ಅದಕ್ಕಿಂತ ನೂರಾರು ಪಟ್ಟು ದುಡ್ಡು ಸಂಪಾದಿಸಲು ನೋಡುತ್ತಾರೆ. ರೋಗಿಯು ಆಸ್ಪತ್ರೆಗೆ ದಾಖಲಾಗುವಾಗ ಆರಂಭವಾಗುವ ಆಸ್ಪತ್ರೆಗಳ ಬಿಲ್ ಕೊನೆಗೆ ಜೀವಂತವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೆ ಅದು ಲಕ್ಷಾಂತರ ರುಪಾಯಿಗಳ ಲೆಕ್ಕದಲ್ಲಿ ಇರುತ್ತದೆ. ಕೆಲವೊಂದು ಆಸ್ಪತ್ರೆಗಳು ರೋಗಿ ಮರಣ ಹೊಂದಿದರೆ ಶರೀರದಲ್ಲಿ ಉಸಿರಾಟ ಇದೆ ಎಂದು ಸಂಬಂದಿಕರನ್ನು ನಂಬಿಸಿ ವೆಂಟಿಲೇಟರ್ ನಲ್ಲಿ ಶವ ಇಟ್ಟು ಗಂಟೆಗಳ ಲೆಕ್ಕದಲ್ಲಿ ಬಿಲ್ ಪಾವತಿಸಿ ಕೊಳ್ಳುತ್ತಿರುವುದು ನಡೆಯುತ್ತಿದೆ. (ಈ ಬಗ್ಗೆ ಹಿಂದೆ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ಮಾಧ್ಯಮದ ಮುಂದೆ ಈ ವಿಚಾರ ಪ್ರಸ್ತಾಪ ಮಾಡಿದ್ದರು.)


ಕೋಟಿಗಟ್ಟಲೆ ರುಪಾಯಿ ಖರ್ಚು ಮಾಡಿ ವೈದ್ಯರಾಗಿ ಬರುವ ಬಹುತೇಕ ಮಂದಿ ಮುಂದಿನ ದಿನಗಳಲ್ಲಿ ಹಣ ಸಂಪಾದಿಸುವ ಬರದಲ್ಲಿ ರೋಗಿಯ ಪ್ರಾಯಕ್ಕೆ ಎಷ್ಟು ಡೋಸ್ ಚುಚ್ಚು ಮದ್ದು ನೀಡಬೇಕೆಂದು ಯೋಚಿಸುವುದಿಲ್ಲ. ತನಗೆ ತೋಚಿದ ರೀತಿಯಲ್ಲಿ ಹೆಚ್ಚು ಡೋಸ್ ಮೆಡಿಸಿನ್ ನೀಡಿದ ಪರಿಣಾಮ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಇತ್ತೀಚೆಗೆ 17 ವರ್ಷದ ಬಾಲಕ ಮೃತ ಪಟ್ಟಿದ್ದಾನೆ ಮತ್ತು ದೇರಳಕಟ್ಟೆಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕಳೆದ ವರ್ಷ ಯುವಕನೊಬ್ಬ ತನ್ನ ಕಾಲನ್ನು ಕಳೆದು ಕೊಂಡಿದ್ದಾನೆ. ಹೆರಿಗೆಗೆ ಬರುವ ಮಹಿಳೆಯರು ಅತೀವ ರಕ್ತಸ್ರಾವ ಸೇರಿದಂತೆ ವೈಧ್ಯರ ನಿರ್ಲಕ್ಷದಿಂದ ಪ್ರಾಣ ಕಳೆದುಕೊಂಡ ಹಲವಾರು ಕರಾಳ ಉದಾಹರಣೆಗಳು ಮಂಗಳೂರು ಖಾಸಗಿ ಆಸ್ಪತ್ರೆಗಳಿಗೆ ಇದೆ. ಅದಲ್ಲದೆ ದಿನಂಪ್ರತಿ ಹೊರ ಜಗತ್ತಿಗೆ ಗೊತ್ತಿಲ್ಲದ ಹಲವಾರು ಘಟನೆಗಳು ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಅನಿವಾರ್ಯವಾಗಿ ಅವಲಂಬಿಸಬೇಕಾಗುತ್ತದೆ.

ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ ಯಾವ ರೀತಿಯಲ್ಲಿ ಇರುತ್ತದೆ ಎಂದರೆ ಸಣ್ಣ ಪ್ರಮಾಣದ ರೋಗದೊಂದಿಗೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಇಲ್ಲದ ರೋಗದ ಹೆಸರಿನಲ್ಲಿ ಚಿಕಿತ್ಸೆ ನೀಡುವ ಕೆಲವು ವೈದ್ಯರು ಮತ್ತು ಆಸ್ಪತ್ರೆ ಮಂಡಳಿ ಕೊನೆಗೆ ದುಬಾರಿ ಬಿಲ್ಲನ್ನು ಪಾವತಿಸುವಂತೆ ಸಂಬಂದಿಕರನ್ನು ಒತ್ತಾಯ ಪಡಿಸುತ್ತಾರೆ. ಬಿಲ್ಲನ್ನು ಪಾವತಿಸದಿದ್ದರೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೆದರಿಸುತ್ತಾರೆ. ಕೊನೆಗೆ ಚಿನ್ನಾಭರಣ ಅಡವಿಟ್ಟು, ಮನೆಯನ್ನು ಬ್ಯಾಂಕಿಗೆ ಅಡವಿಟ್ಟು ಅಥವಾ ವೀಟರ್ ಬಡ್ಡಿಗೆ ದುಡ್ಡು ಪಡೆದು ಆಸ್ಪತ್ರೆಯ ಬಿಲ್ಲು ಕಟ್ಟಿ ಬೀದಿಪಾಲಾದ ಎಷ್ಟೋ ಕುಟುಂಬಗಳಿವೆ. ಮಂಗಳೂರಿನ ಡಾಕ್ಟರ್ ಗಳು ಕನ್ಸಲ್ಟಿಂಗ್ ಹೆಸರಿನಲ್ಲಿ ರೋಗಿಯನ್ನು ಐದು ನಿಮಿಷ ಪರೀಕ್ಷಿಸುವುದಕ್ಕೆ 250 ರುಪಾಯಿ ಯಿಂದ 1500 ರುಪಾಯಿ ವರೆಗೆ ಒಂದೊಂದು ವೈಧ್ಯರಿಗೆ ಬೇರೆ ಬೇರೆ ರೀತಿಯ ದರಗಳನ್ನು ಫಿಕ್ಸ್ ಮಾಡಿಕೊಂಡಿದ್ದಾರೆ. ಅದೂ ಅಲ್ಲದೇ ಅವರು ತಿಳಿಸಿರುವ ಮೆಡಿಕಲ್ ಶಾಫ್ ನಿಂದ ಮೆಡಿಸಿನ್ ಪಡೆಯಬೇಕು ಮತ್ತು ಅವರು ತಿಳಿಸಿರುವ ಲ್ಯಾಬೊರೇಟರಿಯಲ್ಲಿ ಪರೀಕ್ಷೆ ಮಾಡಬೇಕು ಎಂದು ತಿಳಿಸುತ್ತಾರೆ. ಅಂದರೆ ಇದೆಲ್ಲವೂ ಇವರಿಗೆ ರೋಗಿಗಳ ಶುಲ್ಕ ಮಾತ್ರವಲ್ಲದೇ, ಮೆಡಿಸಿನ್ ಕಂಪೆನಿ, ಲ್ಯಾಬೊರೇಟರಿ, ಸ್ಕಾನಿಂಗ್ ಸೆಂಟರ್ ಗಳಿಂದ ದುಬಾರಿ ಮೊತ್ತದ ಕಮಿಶನ್ ಮತ್ತು ಬೆಲೆ ಬಾಳುವ ಕಾರು, ಫ್ಲಾಟ್ ಇನ್ನಿತರ ವಸ್ತುಗಳು ದೊರೆಯುತ್ತದೆ ಎಂದು ಮಂಗಳೂರಿನ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.


ಇಂತಹ ಮೆಡಿಕಲ್ ಮಾಫಿಯಾದಿಂದ ಮಂಗಳೂರಿನ ಜನರನ್ನು ರಕ್ಷಿಸಲು ಸರಕಾರ ಮುಂದಾಗಬೇಕು. ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಜಿಲ್ಲೆಯಲ್ಲಿ ನಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ಮೆಡಿಕಲ್ ಮಾಫಿಯಾ ಬಗ್ಗೆ ನಿಗಾ ಇಡಬೇಕು ಅದಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ನಿಯೋಜನೆ ಮಾಡಿ ಸಮಗ್ರ ತನಿಖೆ ನಡೆಸಬೇಕು ಇತ್ತೀಚೆಗೆ ಆರೋಗ್ಯ ಸಚಿವರು ಘೋಷಿಸಿದಂತೆ ಪ್ರತಿಯೊಂದು ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸೆಗೆ ಸರಕಾರ ನಿಗದಿಪಡಿಸಿದ ದರಪಟ್ಟಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು, ವೈದ್ಯರಿಗೆ ರೋಗಿಯನ್ನು ಪರೀಕ್ಷೆ ಮಾಡುವ ಶುಲ್ಕವನ್ನು ಸರಕಾರ ನಿಗದಿಪಡಿಸಬೇಕು, ವೈದ್ಯರ ನಿರ್ಲಕ್ಷದಿಂದ ರೋಗಿಯ ಪ್ರಾಣಕ್ಕೆ ದಕ್ಕೆಯಾದರೆ ಅಂತಹ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ನಿವ್ರತ್ತ ನ್ಯಾಯಾದೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಅರೋಪಿ ವೈದ್ಯರಿಗೆ ಸರಕಾರ ನೀಡಿದ ವೈದ್ಯಕೀಯ ಅನುಮತಿಯನ್ನು ಕೂಡಲೇ ಹಿಂಪಡೆದು ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಈ ಮೂಲಕ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ಹಗಲು ದರೋಡೆಯನ್ನು ಹಂತಹಂತವಾಗಿ ನಿಯಂತ್ರಣಕ್ಕೆ ತರಬೇಕು ಇಲ್ಲದಿದ್ದರೆ ಇದರ ವಿರುದ್ಧ ಜಿಲ್ಲಾಧ್ಯಂತ ಸಮಾನ ಮನಸ್ಕರನ್ನು ಸೇರಿಸಿಕೊಂಡು ತೀವ್ರ ರೀತಿಯ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ನಡೆಸಲಿದ್ದೇವೆ ಎಂದು ಅನ್ವರ್ ಸಾದತ್ ಬಜತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ಸರಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ


ಅಬ್ದುಲ್ ಬಶೀರ್
ಮಾಧ್ಯಮ ಸಂಯೋಜಕರು
SDPI ದಕ್ಷಿಣ ಕನ್ನಡ ಜಿಲ್ಲೆ

- Advertisement -

Related news

error: Content is protected !!