Thursday, May 16, 2024
spot_imgspot_img
spot_imgspot_img

ಬೆಳ್ತಂಗಡಿ: ಆ್ಯಂಬುಲೆನ್ಸ್‌ ಅಪಘಾತ; ಗಂಭೀರ ಗಾಯಗೊಂಡಿದ್ದ ಮಹಿಳೆಯೂ ಮೃತ್ಯು

- Advertisement -G L Acharya panikkar
- Advertisement -

ಬೆಳ್ತಂಗಡಿ: ಎರಡು ದಿನಗಳ ಹಿಂದೆ ವಗ್ಗ ಬಳಿ ನಡೆದ ಆ್ಯಂಬುಲೆನ್ಸ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ. ರೋಗಿಯಾಗಿದ್ದ ಅಳದಂಗಡಿ ಸನಿಹದ ಮಹಿಳೆಯನ್ನು ಮಂಗಳೂರಿಗೆ ಕೊಂಡೊಯ್ಯುತ್ತಿರುವಾಗ ಈ ಅಪಘಾತ ಸಂಭವಿಸಿ ಆಂಬ್ಯುಲೆನ್ಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು.

ಅಳದಂಗಡಿ ಸನಿಹದ ಬಡಗ ಕಾರಂದೂರು ಗ್ರಾಮದ ಸುಂಕದಕಟ್ಟೆ ನಿವಾಸಿ ದಿ. ಹಸನ್‌ ಅವರ ಪತ್ನಿ ಮರಿಯಮ್ಮ (80) ಮೃತರು. ಆ ಮೂಲಕ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ.

ಶುಕ್ರವಾರ ಮಹಿಳೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಇಸಿಜಿ ಸಹಿತ ತುರ್ತು ಚಿಕಿತ್ಸೆ ನೀಡಿ, ಹೃದಯನಾಳಗಳಲ್ಲಿ ಬ್ಲಾಕ್‌ ಇರುವುದರಿಂದ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಅಂತೆಯೇ ಶಬೀರ್‌ ಅವರ ಆ್ಯಂಬುಲೆನ್ಸ್‌ನಲ್ಲಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ವಗ್ಗ ಬಳಿ ಅಪಘಾತ ನಡೆದಿತ್ತು. ಈ ವೇಳೆ ಚಾಲಕ ಶಬೀರ್‌ ತೀವ್ರ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇನ್ನು ಹೃದಯದ ತೊಂದರೆ ಇದ್ದ ಮಹಿಳೆ ಮರಿಯಮ್ಮ ಅವರು ಅಪಘಾತದ ವೇಳೆ ತಲೆಗೆ ಗಾಯಗಳಾಗಿ ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಆ ವೇಳೆ ಆ್ಯಂಬುಲೆನ್ಸ್‌ನಲ್ಲಿ ಅವರ ಜತೆ ಇದ್ದ ಅವರ ಪುತ್ರ ರಝಾಕ್‌ ಅವರ ಕೈ ಮೂಳೆ ಮುರಿತಕ್ಕೊಳಗಾಗಿದ್ದು, ಅವರು ಚಿಕಿತ್ಸೆಯಲ್ಲಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!