




ಬೆಂಗಳೂರು: ಒಣಹಾಕಿದ್ದ ಬಟ್ಟೆ ತರಲು ಹೋಗಿದ್ದ ವೇಳೆ ನೀರಿನ ಬಕೆಟ್‌ನಲ್ಲಿ ಮುಳುಗಿ ಮಗು ಸಾವನ್ನಪ್ಪಿದ್ದನ್ನು ಕಂಡ ತಾಯಿ ಆಘಾತಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಚಂದ್ರಾಲೇಔಟ್ ಠಾಣೆಯ ಭೈರವೇಶ್ವರ ನಗರದಲ್ಲಿ ನಡೆದಿದೆ.
ಅಗಸ್ತ್ಯ ಮೃತ ಮಗು. ಪ್ರತಿಭಾ ಆತ್ಮಹತ್ಯೆ ಮಾಡಿಕೊಂಡ ತಾಯಿ.
ಮನೆಯಲ್ಲಿ ತಾಯಿ, ಮಗು ಇಬ್ಬರೇ ಇದ್ದಾಗ ಘಟನೆ ನಡೆದಿದ್ದು, ಪ್ರತಿಭಾ ಮತ್ತು ಮಹಂತೇಶ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದರು. ಪ್ರತಿಭಾ ವರ್ಕ್ ಫ್ರಂ ಹೋಂ ಮಾಡುತ್ತಿದ್ದರು. ಗಂಡ ಮಹಂತೇಶ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ರಾತ್ರಿ ಪತಿ ಮಹಂತೇಶ್ ವಾಪಸ್ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಪತ್ನಿ ಬಾಗಿಲು ಓಪನ್ ಮಾಡದಿದ್ದಾಗ ಮಹಂತೇಶ್ ತನ್ನ ಬಳಿ ಇದ್ದ ಕೀಲಿಯಿಂದ ಬಾಗಿಲು ಓಪನ್ ಮಾಡಿದ್ದಾರೆ. ಒಳಗೆ ಬಂದು ನೋಡಿದಾಗ ಪ್ರತಿಭಾ ನೇಣಿಗೆ ಶರಣಾಗಿದ್ದರೆ ಮಗು ಹಾಸಿಗೆ ಮೇಲೆ ಮಲಗಿತ್ತು. ಮಗುವನ್ನು ನೋಡಿದಾಗ ಮಗು ಕೂಡ ಮೃತ ಪಟ್ಟಿರೋದು ದೃಢಪಟ್ಟಿದ್ದು, ಪಕ್ಕದಲ್ಲಿ ಪತ್ನಿ ಬರೆದಿಟ್ಟ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಡೆತ್ ನೋಟ್ ಪಕ್ಕದಲ್ಲಿ ಖಾಲಿಯಾಗಿದ್ದ 15 ಮಾತ್ರೆ ಶೀಟ್ ಕೂಡ ಪತ್ತೆಯಾಗಿದೆ.
ಪ್ರತಿಭಾ ಡೆತ್ ನೋಟ್‌ನಲ್ಲಿ, ನಾನು ಬಟ್ಟೆ ಒಣಹಾಕಿದ್ದು, ಅದನ್ನ ತರಲು ಟೆರೆಸ್‌ಗೆ ಹೋಗಿದ್ದೆ. ಈ ವೇಳೆ ಮಗು ಆಟ ಆಡಿಕೊಂಡು ಬಚ್ಚಲು ಮನೆಗೆ ಹೋಗಿದೆ. ಆ ವೇಳೆ ಬಕೆಟ್‌ನಲ್ಲಿ ಮುಳುಗಿ ಸತ್ತಿದೆ. ನನ್ನ ಮಗುವನ್ನ ಉಳಿಸಿಕೊಳ್ಳಲು ಆಗಿಲ್ಲ. ನನ್ನ ಮಗುವಿನ ಸಾವಿಗೆ ನಾನೇ ಕಾರಣ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ ಬರೆದಿದ್ದಾರೆ.
ಮೊದಲಿಗೆ ಪ್ರತಿಭಾ ಮಾತ್ರೆ ನುಂಗಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆದರೆ ರಕ್ತ ಬಾರದ ಹಿನ್ನೆಲೆ ನೇಣಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








