


ಬೆಂಗಳೂರು: ಗಾಂಜಾ ಮತ್ತಲ್ಲಿ ಗುಂಪೊಂದು ವ್ಯಕ್ತಿಯ ಕೈಕಾಲು ಕಟ್ಟಿ ರಸ್ತೆಯಲ್ಲಿ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಗಿರಿನಗರದ ವೀರಭದ್ರ ಸಿಗ್ನಲ್ ಬಳಿ ನಡೆದಿದೆ.
ಪಾದರಾಯನಪುರದ ನಿವಾಸಿ ಮಹಮ್ಮದ್ ಗಾಯಾಳು ಎಂದು ಗುರುತಿಸಲಾಗಿದೆ. ಸುಟ್ಟ ಗಾಯಗಳಿಂದ ನರಳುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಯುವಕರ ಗುಂಪು ಪೆಟ್ರೋಲ್ ಸುರಿದು ಕೈಕಾಲು ಕಟ್ಟಿಹಾಕಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಬೆಳಗ್ಗೆ ಆರುವರೆ ಸುಮಾರಿಗೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ವ್ಯಕ್ತಿಯ ಕೈಕಾಲು ಕಟ್ಟಿ ಬೆಂಕಿ ಹಚ್ಚಿದ್ದಾರೆ. ವ್ಯಕ್ತಿ ಬಿದ್ದಿದ್ದ ಜಾಗದ ಪಕ್ಕದಲ್ಲಿ ನಿರ್ಜನ ಪ್ರದೇಶವಿದ್ದು, ಅಲ್ಲಿಂದ ಕೆಳಗೆ ತಳ್ಳಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಚಿಂದಿ ಆಯುವ ಏರಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಮುಹಮ್ಮದ್ ಹಾಗೂ ಇತರ ಚಿಂದಿ ಆಯುವವರ ನಡುವೆ ಜಗಳ ನಡೆದಿದೆ. ಇದೇ ಕಾರಣಕ್ಕೆ ಮುಹಮ್ಮದ್ ಬೆಂಕಿ ಹಚ್ಚಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿರುವುದಾಗಿ ತಿಳಿದುಬಂದಿದೆ.








