Monday, July 20, 2026
spot_imgspot_img
spot_imgspot_img

ಬೆಂಗಳೂರು; ರೌಡಿ ಗ್ಯಾಂಗ್‌ನಿಂದ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ: ವೀಡಿಯೋ ವೈರಲ್

- Advertisement -
- Advertisement -

ಬೆಂಗಳೂರು: ಹೊರವಲಯದಲ್ಲಿ ಮತ್ತೊಂದು ಮೃಗೀಯ ಕೃತ್ಯ ಬೆಳಕಿಗೆ ಬಂದಿದೆ. ರೌಡಿ ಗ್ಯಾಂಗ್‌ನಿಂದ ಇಬ್ಬರು ಯುವಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ವಿಡಿಯೊ ವೈರಲ್ ಆಗಿದೆ. ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ನರಿಗುಡ್ಡೆಯ ಬಾಳೆಕೆರೆ ಏರಿ ಮೇಲೆ ನಡೆದ ಘಟನೆಯಲ್ಲಿ ಪುನೀತ್ ಮತ್ತು ರಫೆಲ್ ಆಂಥೋನಿ ಎಂಬ ಯುವಕರ ಮೇಲೆ ರೌಡಿ ಗ್ಯಾಂಗ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ದಮ್ಮಯ್ಯ ಬಿಟ್ಟುಬಿಡಿ, ಅಪ್ಪ-ಅವ್ವ, ಕಾಲಿಗೆ ಬೀಳುತ್ತೇನೆ ಬಿಟ್ಟುಬಿಡಿ ಎಂದು ಬೇಡಿಕೊಂಡರೂ, ರೌಡಿ ಪಟಾಲಂ ಬಿಡದೇ ಕ್ರೂರವಾಗಿ ಥಳಿಸಿದ್ದಾರೆ.

ಇದೇ ತಿಂಗಳ 22ರ ಮಧ್ಯಾಹ್ನ, ರೌಡಿಶೀಟರ್‌ಗಳಾದ ಕೋಳಿ ಫಾರಂ ಗಜ, ಆಂಥೋನಿ ಸೈಮನ್, ವಿನಯ್ ಅಂಡ್ ಗ್ಯಾಂಗ್ ಬಾಳೆಕೆರೆ ಏರಿ ಮೇಲೆ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ, ಹಳೇ ದ್ವೇಷದ ಹಿನ್ನೆಲೆಯಲ್ಲಿ ಪುನೀತ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಿಂದೆ ಪುನೀತ್, ರೌಡಿ ಆಂಥೋನಿ ಸೈಮನ್‌ಗೆ ಪೆಪ್ಪರ್ ಸ್ಪ್ರೇ ಹೊಡೆದಿದ್ದನಂತೆ. ಇದೇ ಕಾರಣಕ್ಕೆ ಪುನೀತ್‌ನನ್ನ ಕೆರೆ ಏರಿ ಮೇಲೆ ಎಳೆದುಕೊಂಡು ಬಂದು, ಚಾಕು ಮತ್ತು ದೊಣ್ಣೆಗಳಿಂದ ಮನಸೋ ಇಚ್ಛೆ ಥಳಿಸಿದ್ದಾರೆ.

ಪುನೀತ್ ಮೇಲಿನ ಹಲ್ಲೆಯನ್ನು ನೋಡಿದ ತಟಗುಪ್ಪೆ ಗ್ರಾಮದ ರಫೆಲ್ ಆಂಥೋನಿ, ತನ್ನ ಊರಿನವನಾದ ಆಂಥೋನಿ ಸೈಮನ್‌ಗೆ ʻಯಾಕ್ರೋ ಅವನಿಗೆ ಹೊಡೆಯುತ್ತಿದ್ದೀರಾ?ʼ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ರೌಡಿ ಗ್ಯಾಂಗ್, ರಫೆಲ್ ಆಂಥೋನಿಯನ್ನ ಅಡ್ಡಗಟ್ಟಿ, ದೊಣ್ಣೆ ಮತ್ತು ಚಾಕುಗಳಿಂದ ಹಲ್ಲೆ ನಡೆಸಿದೆ. ಅಟ್ಟಾಡಿಸಿ ಕಾಲಲ್ಲಿ ತುಳಿದು, ನಂತರ ಸುಮಾರು 10 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ. ಈ ಅಮಾನವೀಯ ಹಲ್ಲೆಯಿಂದ ರಫೆಲ್ ಆಂಥೋನಿಯ ಕೈ ಮತ್ತು ಕಾಲಿನ ಮೂಳೆಗಳು ಮುರಿದಿದ್ದು, ಗ್ರಾಮಸ್ಥರ ಸಹಾಯದಿಂದ ಆಸ್ಪತ್ರೆಗೆ ಸೇರಿದ್ದಾನೆ.

ಘಟನೆ ಸಂಬಂಧ ಕಗ್ಗಲೀಪುರ ಇನ್ಸ್‌ಪೆಕ್ಟರ್ ನಂಜೇಗೌಡ ಅಂಡ್ ಟೀಮ್ ಕೊಲೆ ಯತ್ನ ಪ್ರಕರಣದಡಿ ತಕ್ಷಣ ಕಾರ್ಯಾಚರಣೆಗಿಳಿದು, ಆಂಥೋನಿ ಸೈಮನ್ ಮತ್ತು ಕೋಳಿ ಫಾರಂ ಗಜನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!