ಅದೆಷ್ಟೋ ಹೆಣ ಬಿದ್ದರೂ ನೆತ್ತರು ಹರಿದರೂ ಭೀಮೆಯ ಒಡಲು ತಣ್ಣಗಾಗುವಂತೆ ಕಾಣುತ್ತಿಲ್ಲ. ಸಾಲು ಸಾಲು ಕೊಲೆಗಳು ನಡೆಯುತ್ತಲೇ ಇರುವ ಈ ಪಾತಕಲೋಕ ಮತ್ತೆ ಸುದ್ದಿಯಾಗಿದೆ.

ಮತ್ತೆ ಭೀಮಾತೀರದಲ್ಲಿ ರಕ್ತದ ಹೊಳೆ ಹರಿದಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಅವರ ಕಿರಿಯ ಸಹೋದರನನ್ನು ದುಷ್ಕರ್ಮಿಗಳು ನುಂಗಿ ನೀರು ಕುಡಿದಿದ್ದಾರೆ.

ಹನುಮಂತ ಕೂಡಲಗಿ (40) ಮೃತ ವ್ಯಕ್ತಿಯಾಗಿದ್ದು, ಜೇವರ್ಗಿ ತಾಲೂಕಿನ ಬಳ್ಳುಂಡಗಿ ಗ್ರಾಮದ ಬಳಿ ಹನುಮಂತನ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆ ಕೊಲೆ ನಡೆದಿದೆ ಎನ್ನಲಾಗುತ್ತಿದೆ.

ಮೃತ ಹನುಮಂತ ಹಾಗೂ ಆತನ ಅಣ್ಣ ಶಾಂತಪ್ಪ ಜೇವರ್ಗಿ ತಾಲೂಕಿನ ಮಯೂರ ಗ್ರಾಮದ ಬಿಜೆಪಿ ಮುಖಂಡ ಶಿವಲಿಂಗ ಭಾವಿಕಟ್ಟಿ ಎಂಬುವರ ಕೊಲೆ ಪ್ರಕರಣದಲ್ಲಿ 2019ರ ನವೆಂಬರ್‌ನಲ್ಲಿ ಜೈಲು ಸೇರಿದ್ದರು. ಕೆಲ ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಡಿವೈಎಸ್ಪಿ ಸೇರಿ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.










