
ಬಿಗ್ ಬಾಸ್ ಸ್ಪರ್ಧಿ ಹಾಗೂ ವಕೀಲ ಕೆ.ಎನ್.ಜಗದೀಶ್ ಕುಮಾರ್ ಮೇಲೆ ಕೆಲ ಸ್ಥಳೀಯರು ಮತ್ತೆ ಹಲ್ಲೆ ನಡೆಸಿದ್ದು, ಈ ವೇಳೆ ವಕೀಲರ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ನಗರದ ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮದೇವಿ ಉತ್ಸವ ವಿಷಯವಾಗಿ ಜಗದೀಶ್ ಹಾಗೂ ಕೆಲ ಸ್ಥಳೀಯರ ಮಧ್ಯೆ ಜಗಳವಾಗಿದ್ದು, ರೊಚ್ಚಿಗೆದ್ದ ಉದ್ರಿಕ್ತರ ಗುಂಪು, ಜಗದೀಶ್ ಮನೆಗೆ ನುಗ್ಗಲು ಯತ್ನಿಸಿ ವಕೀಲ ಹಾಗೂ ಅವರ ಗನ್ ಮ್ಯಾನ್ ನನ್ನು ಹಿಡಿದು ಥಳಿಸಿದೆ. ಈ ವೇಳೆ ಆತ್ಮ ರಕ್ಷಣೆಗೆ ಜಗದೀಶ್ ಅವರ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗಲಾಟೆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದು, ಗಾಯಗೊಂಡ ಜಗದೀಶ್ ಅವರನ್ನು ರಕ್ಷಿಸಿ ಆಸತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಜಗದೀಶ್ ಅವರು ಮೂಗಿನಲ್ಲಿ ರಕ್ತ ಸುರಿಯುತ್ತಿರುವಾಗಲೇ ತಮ್ಮ ಮೇಲಿನ ಹಲ್ಲೆ ಬಗ್ಗೆ ಫೇಸ್‌ಬುಕ್ ಲೈವ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೊಡಿಗೇಹಳ್ಳಿ ಸಮೀಪ ಅಣ್ಣಾಮ್ಮದೇವಿ ಉತಸ್ವವ ನಡೆಸುವ ವಿಚಾರವಾಗಿ ಜಗದೀಶ್ ಹಾಗೂ ಸ್ಥಳೀಯರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದ್ದು, ಕೆಲವರನ್ನು ಜಗದೀಶ್ ನಿಂದಿಸಿರುವುದ ಪ್ರಚೋದನೆ ನೀಡಿದೆ ಎನ್ನಲಾಗಿದೆ. ಇದೇ ವಿಷಯವಾಗಿ ಗುರುವಾರವೂ ಗಲಾಟೆ ಆಗಿತ್ತು. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








