ಪಾಟ್ನಾ: ಬಿಹಾರದಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜುಲೈ 16ರಿಂದ ಜುಲೈ 30 ರವೆರೆಗೆ ಲಾಕ್ ಡೌನ್ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಡಿಸಿಎಂ ಸುಶೀಲ್ ಕುಮಾರ್ ಮೋದಿ ಮಾಹಿತಿ ನೀಡಿದ್ದು, ಕಟ್ಟುನಿಟ್ಟಿನ ಲಾಕ್ ಡೌನ್ ಬಗ್ಗೆ ಮಾರ್ಗ ಸೂಚಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ 15 ದಿನಗಳ ಲಾಕ್ ಡೌನ್ ಅವಧಿಯಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ಎಲ್ಲ ಅಂಗಡಿಗಳು, ಮಾಲ್ ಗಳು, ಧಾರ್ಮಿಕ ಕೇಂದ್ರಗಳನ್ನು ಬಂದ್ ಮಾಡಲಾಗುವುದು ತಿಳಿಸಿದ್ದಾರೆ. ಮಂಗಳವಾರ ರಾಜ್ಯದಲ್ಲಿ ಒಟ್ಟಾರೆ ಕೊಒರನಾ ವೈರಸ್ ಪ್ರಕರಣ 18,853ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,432 ಹೊಸ ಪ್ರಕರಣಗಳು ದಾಖಲಾಗಿವೆ. ಇನ್ನು ಸಾವಿನ ಸಂಖ್ಯೆ 134ಕ್ಕೆ ಏರಿಕೆಯಾಗಿದೆ. ಈ ಹೊಸ ಪ್ರಕರಣಗಳಲ್ಲಿ 162 ಪ್ರಕರಣಗಳ ಪಾಟ್ನಾ ಜಿಲ್ಲೆಯಲ್ಲಿ ವರದಿಯಾಗಿವೆ.
ಹೀಗಾಗಿ ಮೂರು ಸಗಟು ತರಕಾರಿ ಮಾರುಕಟ್ಟೆಗಳಾದ ಮಿಥಾಪುರ, ಕಂಕರ್ಬಾಗ್ ಮತ್ತು ರಾಜೇಂದ್ರ ನಗರವನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಕುಮಾರ್ ರವಿ ಆದೇಶಿಸಿದ್ದಾರೆ.ಕೊರೊನ ಸೋಂಕಿನಿಂದ ಈವರೆಗೆ ರಾಜ್ಯದಲ್ಲಿ 12,364 ಜನರು ಚೇತರಿಸಿಕೊಂಡಿದ್ದಾರೆ.
ಸೋಮವಾರ, ಗ್ರಾಮೀಣ ಕಾಮಗಾರಿ ಇಲಾಖೆಯ ಸಚಿವ ಶೈಲೇಶ್ ಕುಮಾರ್ ಗೆ ಕೊರೊನಾ ಪಾಸಿಟಿವ್ ಬಂದಿದೆ. ಸಚಿವರಿಗೆ ರೋಗದ ಲಕ್ಷಣಗಳು ಕಂಡುಬರುತ್ತಿಲ್ಲ. ಆದರೆ ಮುಂಗರ್ ಜಿಲ್ಲೆಯ ಜಮಾಲ್ಪುರ್ ಕ್ಷೇತ್ರಕ್ಕೆ ಇತ್ತೀಚೆಗೆ ಪ್ರವಾಸ ಕೈಗೊಂಡ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಕೊರೊನಾ ಪರೀಕ್ಷೆಗೆ ಒಳಗಾದಾಗ ಕೊರೊನಾ ತಗುಲಿರುವುದು ದೃಢವಾಗಿದೆ.
ಈ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ವಿನೋದ್ ಕುಮಾರ್ ಸಿಂಗ್ ಮತ್ತು ಅವರ ಪತ್ನಿ ವೈರಸ್ ಸೋಂಕಿಗೆ ಒಳಗಾಗಿದ್ದರು.