ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ನಿವಾಸಿ ಜಯಶ್ರೀ (38) ಅವರ ಮನೆಯಲ್ಲಿ ಅಂಗಳದಲ್ಲಿ ಸಂಭವಿಸಿದ ಸ್ಫೋಟಕ ಸಿಡಿತದಿಂದ ಬಾಲಕನೊಬ್ಬರಿಗೆ ಗಾಯವಾದ ಘಟನೆ ಫೆ.18ರಂದು ಸಂಜೆ ನಡೆದಿದೆ.

ದೂರುದಾರರಾದ ಜಯಶ್ರೀ ಅವರ ಇಬ್ಬರು ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಅಲ್ಲಿ ಬಿದ್ದಿದ್ದ ಚೆಂಡಿನ ಆಕಾರದ ಪ್ಲಾಸ್ಟಿಕ್ ಕಟ್ಟೊಂದನ್ನು ಕಂಡು ಅದರಲ್ಲಿ ಆಟವಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆ ಪ್ಲಾಸ್ಟಿಕ್ ಕಟ್ಟ ಅಚಾನಕ್ ಸಿಡಿದು ಹೊಗೆ ಹೊರಬಂದಿದ್ದು, ಕಲ್ಲಿನ ಚೂರುಗಳು ಚದುರಿದ ಪರಿಣಾಮ ದೂರುದಾರ ಮಗನ ಪೈಕಿ ಓರ್ವನ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಫೋಟಗೊಂಡ ವಸ್ತುವನ್ನು ಪರಿಶೀಲಿಸಿದಾಗ, ಯಾರೋ ಕಿಡಿಗೇಡಿಗಳು ಕಾಡುಪ್ರಾಣಿಗಳ ಬೇಟೆಗಾಗಿ ಇಟ್ಟಿದ್ದ ಸ್ಫೋಟಕವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ, ಅದನ್ನು ನಾಯಿಗಳು ಮನೆಯ ಅಂಗಳಕ್ಕೆ ಎಳೆದುಕೊಂಡು ಬಂದಿರಬಹುದೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಗಾಯಗೊಂಡ ಬಾಲಕನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯ ಇಲ್ಲವೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 09/2026 ರಂತೆ 9(B)(1)(b) Explosive Act 1884 ಹಾಗೂ 125(A) ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.








