Friday, May 3, 2024
spot_imgspot_img
spot_imgspot_img

ಉಸಿರುಗಟ್ಟಿಸುವ ಪ್ರಾಮಾಣಿಕತೆಗಳು

- Advertisement -G L Acharya panikkar
- Advertisement -

ವ್ಯಕ್ತಿಯ ವ್ಯಕ್ತಿತ್ವದಲ್ಲಿ ನೂರೆಂಟು ಮುಖವಾಡಗಳು. ಕೆಲವೊಂದು ಕಾಣುತ್ತವೆ, ಅವು ನಯ-ವಿನಯದಿಂದ ವ್ಯವಹರಿಸುತ್ತದೆ. ಕಾಣದ್ದು ಕತ್ತರಿಸುವಷ್ಟು ನೋವನುಣಿಸುತ್ತದೆ, ತತ್ತರಿಸುವಂತೆ ಮಾಡುತ್ತದೆ. ಈ ದ್ವಂದ್ವತೆಗಳು ಮೌನವಾಗಿ ವ್ಯಕ್ತಿಯನ್ನು ಮೌನದ ಪಾತಾಳಕ್ಕೆ ತಳ್ಳುತ್ತದೆ. ಮುಗ್ದ ಮೂಕ ಜೀವಿಗಳನ್ನು ಪ್ರೇಮದಿಂದ ಸಾಕಿ , ಬಲಿ ಕಲ್ಲಿಗೆ ರಕ್ತಕ್ಕಾಗಿ ಕೊಯ್ದು ಹಿಂಡುವಂತೆ, ಜೀವಂತವಾಗಿ ವ್ಯಕ್ತಿಯನ್ನು ವಿನಾ ಆಪಾದನೆಯ ಬಲಿಗೆ ತಳ್ಳಿ ಬಿಡುವ ಕಾಯಕವನ್ನೇ ಮಾಡಿ ಸಂತಸಪಡುವವರು ಅನೇಕರು. ರಾಕ್ಷಸೀಯವಾಗಿ ತಾಮಸ ಪ್ರವೃತ್ತಿ ಎನ್ನುವುದು ಯಾವ ವರ್ಗದವರನ್ನೂ ಬಿಟ್ಟಿಲ್ಲ. ಎಲ್ಲರೂ ತಮ್ಮ ಗೌರವ ಮತ್ತು ಸಂಪತ್ತಿನ ಸಂಪಾದನೆಗೆ ಯಾವುದನ್ನು ಮಾಡಲು ಹೇಸುವವರಲ್ಲ. ಮೂಗಿದ್ದರೆ ತಾನೇ ವಾಸನೆ, ಕಣ್ಣು ಕಿವಿಯಿದ್ದರೆ ಮಾತ್ರ ಗ್ರಹಿಕೆಯಲ್ಲವೇ? ಹೇಯ ಕಾಯಕ ಮಾಡಲು ಹೊರಟಾಗ ಎಲ್ಲವನ್ನು ಒಮ್ಮೆಗೆ ಮುಚ್ಚಿಕೊಂಡರಾಯಿತು ಎಂಬಂತೆ ನಡೆದುಕೊಳ್ಳುತ್ತೇವೆ. ಇದನ್ನೆಲ್ಲಾ ವಿಸ್ಮಿತರಾಗಿ ಕಾಣುವ ನಮ್ಮ ಎಳೆಯ, ಮುಗ್ದತೆಯ ಮಕ್ಕಳು ತನ್ನ ನಿಜ ಯೋಚನೆಗೆ ತಿಲಾಂಜಲಿಯಿತ್ತು ತಪ್ಪು ದಾರಿಗಿಳಿಯುತ್ತಾರೆ. ಕ್ರೂರತನ, ವಂಚನೆಯೇ ಸಾಧನೆಯ ಸತ್ಯವೆಂದು ನಂಬಿ ಬಿಡುತ್ತಾರೆ.

ಅನ್ಯರ ವ್ಯಕ್ತಿತ್ವವನ್ನು ಹಾಳುಗೆಡಹಲು ಕಾರಣಗಳ ಪಟ್ಟಿ ದೊಡ್ಡದಿದೆ. ತನ್ನ ಗೌರವಕ್ಕೆ ಕುಂದು ತರುತ್ತಾನೆಂಬ ಭಯ. ಮುಂದೆ ತಾನು ಅವಕಾಶ ವಂಚಿತನಾಗಬಹುದೆಂಬ ಭಯ. ತನ್ನ ಆದಾಯಕ್ಕೆ ದಕ್ಕೆಯಾಗಬಹುದೆಂಬ ಭಯ. ತನ್ನ ಸತ್ಯ ಮಿಥ್ಯಗಳ ಅನಾವರಣಗೊಳಿಸುತ್ತಾನೆಂಬ ತವಕ. ತನ್ನ ಸ್ನೇಹಪರರು ಸ್ಥಾನಪಲ್ಲಟವಾಗಬಹುದೆಂಬ ಭಯ, ತನ್ನಿಂದ ಸಿರಿವಂತ, ಅನುಕೂಲವಂತನಾಗಬಹುದೆಂಬ ಮತ್ಸರ ಹೀಗೆ. ಸರಳವಾಗಿ ಹೇಳುವುದಿದ್ದರೆ ವ್ಯಕ್ತಿಯ ಮನದೊಳಗೆ ಹೆಪ್ಪುಗಟ್ಟಿದ ಷಡ್ವೈರಿಗಳಾದ ಕಾಮ, ಕ್ರೋಧ, ಲೋಭ, ಮೋಹ,ಮದ, ಮತ್ಸರಗಳು. ಇದು ಯಾರನ್ನು ಬಿಟ್ಟಿದೆ ಹೇಳಿ? ಮಗುವಿನಲ್ಲಿ ಆಟಿಕೆಗಾಗಿ,ಶಾಲೆ ಸೇರಿದರೆ ಅಂಕಗಳಿಗಾಗಿ, ಸಮಾಜದಲ್ಲಿ ಗೌರವ, ಆಸ್ತಿ ಅಂತಸ್ತಿಗಾಗಿ ಹಿರಿಯರಾದರೆ ಮಕ್ಕಳ ಕಡೆಗಣನೆಗಾಗಿ, ಇವುಗಳಿಂದ ಯಾವಾಗ ಮುಕ್ತಿ ಹೇಳಿ? ಜೀವ ಪಡೆದುಕೊಂಡ ಮೇಲೆ ಮೈಗೂಡಿಸಿಕೊಂಡು ಬಂದ ವಿಚಿತ್ರ ಕೊಡುಗೆಗಲೆನ್ನಬೇಕಷ್ಟೆ.

ನಮ್ಮನ್ನು ಬಲಿಯಾಗಿಸಿದ ಹಂಗಿನ ಬಗೆಗಳು ಹತ್ತು ಹಲವು. ಗತಿಗೆಟ್ಟ ನಮ್ಮ ಆರ್ಥಿಕ ಸ್ಥಿತಿಗೆ ಸಹಾಯಕರಾಗಿ ಒದಗಿ ನಮ್ಮ ವ್ಯಕ್ತಿತ್ವಕ್ಕೆ ಮುಳ್ಳಾಗುತ್ತಾರೆ. ನಮ್ಮ ಮುಗ್ದತನವನ್ನು ದಾಳವಾಗಿ ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ನಮ್ಮ ಆಂತರಿಕ ಬಾಹ್ಯ ಸಂಸ್ಕಾರಕ್ಕೆ ಮಣಿದು ನಮ್ಮನ್ನು ಉಪಯೋಗಿಸಿ ಸಿಪ್ಪೆಯಂತೆ ಬಿಸಾಡುತ್ತಾರೆ. ಗೌರವಕ್ಕೆ ದಕ್ಕೆ ಬರುತ್ತದೆಂದರೆ ಸ್ನೇಹಿತರಂತೆ ನಟಿಸಿ ನಮ್ಮ ಗುಪ್ತ ವಿಚಾರಗಳನ್ನು ಪಡೆದು ವಿರೋಧಿಗಳಾಗುತ್ತಾರೆ. ಕಾಮನೆಗೆ ಆಶ್ರಯದಾತರಾಗಿ ನಮ್ಮ ಮಾನಾಭಿಮಾನಕ್ಕೆ ಕುಂದು ತರುತ್ತಾರೆ. ನಮ್ಮ ಅಸಹಾಯತೆಗೆ ಸಹಾಯಹಸ್ತ ಚಾಚುತ್ತಾ ಸಮಾಜವಿಮುಕ್ತನನ್ನಾಗಿ ಮಾಡುವುದಲ್ಲದೆ ನಮ್ಮನ್ನು ಎಲ್ಲೂ ಸೋಲಿಸಲಾಗದಿದ್ದರೆ ವಾಮಾಚಾರದ ಹಾದಿ ಹಿಡಿಯುತ್ತಾರೆ.

ಸ್ನೇಹಿತರೇ ಇದು ಮನುಷ್ಯನೊಳಗೆ ಸೆರೆಯಾಗಿಸುವ ಮತ್ತು ಸೆರೆಯಾಗುವ ತತ್ವಗಳು. ಎಲ್ಲಿ ಎಷ್ಟು ಬೇಕೋ ಅಷ್ಟರೊಳಗಿದ್ದರೆ ಚೆನ್ನ. ಒಮ್ಮೆ ನಿಷ್ಟುರವಾದರೂ ನೇರವಾದ ವ್ಯವಹಾರ ಒಳ್ಳೆಯದು, ಅತಿ ಸಹಾಯಕರಾಗುವುದಕ್ಕಿಂತ ಕೆಲವೊಮ್ಮೆ ಆಸಹಾಯಕರಾಗುವುದು ಉತ್ತಮ. ನಾವು ದಾರಿ ತೋರುವುದಕ್ಕಿಂತ ಅವರೇ ದಾರಿ ಕಂಡುಕೊಳ್ಳುವುದು ಅತ್ಯುತ್ತಮ. ಅತಿ ಪ್ರಾಮಾಣಿಕತೆಯ ಮೆರೆದು ಅಪ್ರಮಾಣಿಕ, ಅಸತ್ಯನಾಗುವುದಕ್ಕಿಂತ ಹಾಗೇ ಸುಮ್ಮನಿರುವುದು ಒಳ್ಳೆಯದು. ನೋವು ನಲಿವುಗಳೊಡನೆ ನಟನಾಗುವುದಕ್ಕಿಂತ ಪ್ರೇಕ್ಷಕನಾಗುವುದು ಒಳ್ಳೆಯದು.

ಇವೆಲ್ಲವನ್ನೂ ಅರ್ಥೈಸಿಕೊಂಡು ಸಾಧಿಸಿಕೊಳ್ಳಬೇಕೆಂಬ ಛಲವಿದ್ದರೆ ನಮ್ಮ ಸಾಮರ್ಥ್ಯವನ್ನು ಮೊದಲೇ ಅಳತೆಮಾಡಿಕೊಂಡು ಪರ ವಿರೋಧವ ತಾಳುವ ಶಕ್ತಿವಂತರಾಗಿ, ಬರುವ ನಿರೀಕ್ಷಿತ ಫಲಗಳ ಅನುಭವಿಸಲು ಸಿದ್ದರಾಗೋಣ . ನಮ್ಮ ಸತ್ಯ ಹಲವರಿಗೆ ಅಸತ್ಯ, ಅಧರ್ಮವಾಗಬಹುದು. ಅದನ್ನೆಲ್ಲ ಮೀರಿ ಬದುಕುತ್ತೇವೊ ನಾವು ಸಾಧಕರಾಗುತ್ತೇವೆ.

?️ರಾಧಾಕೃಷ್ಣ ಎರುಂಬು

- Advertisement -

Related news

error: Content is protected !!