Friday, June 5, 2026
spot_imgspot_img
spot_imgspot_img

ತಲಪಾಡಿ ಅಪಘಾತದಲ್ಲಿ ಬಸ್ ಬ್ರೇಕ್‍ಫೇಲ್ ಸಂಭವಿಸಿಲ್ಲ; ಚಾಲಕನ ನಿರ್ಲಕ್ಷ್ಯವೇ ಕಾರಣ- ಕೆಎಸ್‌ಆರ್‌ಟಿಸಿ ಸ್ಪಷ್ಟನೆ

- Advertisement -
- Advertisement -

ಮಂಗಳೂರು: ಕರ್ನಾಟಕ-ಕೇರಳ ಗಡಿ ಭಾಗದ ತಲಪಾಡಿಯಲ್ಲಿ ಆಗೋಸ್ಟ್ 28 ರಂದು ಕೆ.ಎಸ್.ಆರ್.ಟಿ.ಸಿ ಬಸ್- ರಿಕ್ಷಾ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ಬಸ್ ಬ್ರೇಕ್ ಫೇಲ್ ಆಗಿರುವುದಿಲ್ಲ; ಬದಲಾಗಿ ಬಸ್ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ ಹಿರಿಯ ನಿಯಂತ್ರಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಸ್ ಚಾಲಕ ನಿಜಲಿಂಗಪ್ಪ ಚಲವಾದಿಯ ಅಜಾಗರೂಕತೆಯಿಂದ ಅಪಘಾತವಾಗಿದೆ. ಕಾಸರಗೋಡಿನಿಂದ ಹೊರಟಿದ್ದ ಬಸ್ ಮಧ್ಯಾಹ್ನ 1:45 ರ ವೇಳೆಗೆ ತಲಪಾಡಿ ಸಮೀಪಿಸಿದಾಗ ಇಳಿಜಾರು ರಸ್ತೆಯಲ್ಲಿ ವೇಗವಾಗಿ ಚಲಾಯಿಸಿದ್ದು, ಆಟೋಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿರುತ್ತಾರೆ. ಅಷ್ಟರಲ್ಲಿ ಬಸ್ಸು ಆಟೋಗೆ ಮಾರಣಾಂತಿಕ ಢಿಕ್ಕಿಯಾಗಿ, ಬಸ್ ಹಠಾತ್ತನೆ ಸ್ಕಿಡ್ ಆಗಿ ತಿರುಗಿ ನಿಂತಿದೆ.

ಅಪಘಾತದಲ್ಲಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರಿಂದ ಭಯಗೊಂಡು ಚಾಲಕ ತನ್ನ ಸೀಟಿನಿಂದ ಕೆಳಗಿಳಿದು ಓಡಿ ಹೋಗಿದ್ದಾನೆ. ಇದರಿಂದಾಗಿ ಬಸ್ಸು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಇಬ್ಬರು ಪ್ರಯಾಣಿಕರಿಗೆ ಢಿಕ್ಕಿಯಾಗಿ ನಿಂತಿದೆ ಎಂದು ತಿಳಿಸಿದ್ದಾರೆ.

ನಿಗಮದ ಎಲ್ಲಾ ಬಸ್ಸುಗಳಿಗೆ ಆಂತರಿಕ ವಿಮೆ ಇರುತ್ತದೆ. ಅಪಘಾತದಲ್ಲಿ ಮೃತ ಪಟ್ಟವರ ವಾರಸುದಾರರಿಗೆ ಈ ಪರಿಹಶರ ನಿಧಿಯಿಂದ ತಲಾ 1 ಲಕ್ಷ ರೂಪಾಯಿಗಳಂತೆ ತುರ್ತು ಮಧ್ಯಂತರ ಪರಿಹಾರವನ್ನು ನೀಡಲಾಗಿದೆ. ಗಾಯಗೊಂಡ ಇಬ್ಬರ ಸಂಪೂರ್ಣ ವೈದ್ಯಕೀಯ ವೆಚ್ಚದ ಮೊತ್ತವನ್ನು ನಿಗಮದ ವತಿಯಿಂದ ಭರಿಸಲಾಗುವುದು.

ಅಪಘಾತಕ್ಕೀಡಾದ ವಾಹನವು ಇತ್ತೀಚೆಗೆ ಆಗಸ್ಟ್ 26ರಂದು ಎಫ್‌ಸಿ ನವೀಕರಣಕ್ಕೆ ಒಳಗಾಗಿತ್ತು ಮತ್ತು ಆರ್‌ಟಿಒ ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆದುಕೊಂಡಿತ್ತು. ಮರುದಿನ, ಆಗಸ್ಟ್ 27ರಂದು, ಅದನ್ನು ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಯೋಜಿಸಲಾಗಿತ್ತು. ಅಪಘಾತಕ್ಕೆ ಮುನ್ನ, ಬಸ್ ಈಗಾಗಲೇ 9 ರೌಂಡ್ ಟ್ರಿಪ್‌ಗಳನ್ನು ಪೂರ್ಣಗೊಳಿಸಿದ್ದು, ಸುಮಾರು 540 ಕಿ.ಮೀ ಕ್ರಮಿಸಿತ್ತು. ಈ ದುರ್ಘಟನೆ ಅದರ 10ನೇ ಟ್ರಿಪ್‌ನಲ್ಲಿ (ಕಾಸರಗೋಡು-ಮಂಗಳೂರು) ಸಂಭವಿಸಿದೆ.

ಕೆಎಸ್‌ಆರ್‌ಟಿಸಿ ತಾಂತ್ರಿಕ ತಂಡವು ಅಪಘಾತ ಸ್ಥಳದಲ್ಲಿ ವಾಹನವನ್ನು ಪರಿಶೀಲಿಸಿದ್ದು, ಅದು ಉತ್ತಮ ಸ್ಥಿತಿಯಲ್ಲಿತ್ತು ಮತ್ತು ಯಾವುದೇ ದೋಷವಿರಲಿಲ್ಲ ಎಂದು ದೃಢಪಡಿಸಿದೆ. ಹೆಚ್ಚುವರಿಯಾಗಿ, ಮತ್ತೊಬ್ಬ ಚಾಲಕ ಬಸ್ ಅನ್ನು ಅಪಘಾತ ಸ್ಥಳದಿಂದ ಪೊಲೀಸ್ ಠಾಣೆಗೆ ಸುರಕ್ಷಿತವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.

“ಈ ದುರ್ಘಟನೆ ಚಾಲಕನ ಅಜಾಗರೂಕ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಮಾತ್ರ ಸಂಭವಿಸಿದೆ. ಬ್ರೇಕ್ ವೈಫಲ್ಯ ಅಥವಾ ಯಾವುದೇ ತಾಂತ್ರಿಕ ದೋಷದಿಂದಲ್ಲ” ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ವಿಭಾಗೀಯ ನಿಯಂತ್ರಕರು ಸ್ಪಷ್ಟಪಡಿಸಿದ್ದಾರೆ.

- Advertisement -

Related news

error: Content is protected !!