


ಹೈದರಾಬಾದ್: ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಪೋಸ್ಟ್ ಮಾಡಿದ್ದಕ್ಕಾಗಿ ಮೆಟಾ ಇಂಡಿಯಾ ಮುಖ್ಯಸ್ಥರು ಸೇರಿದಂತೆ ಹಲವಾರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ ನಡೆಯುವಾಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮೋದಿಯವರ ಮಾರ್ಫ್ ಮಾಡಿದ ಮತ್ತು ಆಕ್ಷೇಪಾರ್ಹ ವಿಡಿಯೋಗಳು, ಫೋಟೋಗಳನ್ನು ಹಂಚಿಕೊಳ್ಳಲಾಗಿತ್ತು. ಇದರಲ್ಲಿ ಆಕ್ರಮಣಕಾರಿ ಭಾಷೆ, ಅಪಹಾಸ್ಯ ಮತ್ತು ಅಸಭ್ಯ ಹೇಳಿಕೆಗಳನ್ನು ಬಳಸಲಾಗಿದ್ದು, ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗಿ, ಆಕ್ರಮಣಕಾರಿ ವರ್ತನೆಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಇದು ಸಮಾಜದಲ್ಲಿ ಅಶಾಂತಿಗೆ ಕಾರಣ ಆಗಲಿದೆ ಎಂಬುದಾಗಿ ಆರೋಪಿಸಿ ಉದ್ಯಮಿ ಎಸ್. ಅರವಿಂದ್ ರೆಡ್ಡಿ ಮತ್ತು ತೆಲಂಗಾಣ ಬಿಜೆಪಿ ಕಾರ್ಯಕರ್ತ ಟಿ ಸಾಯಿಕಿರಣ್ ಗೌಡ ದೂರು ನೀಡಿದ್ದರು.
ಈ ಸಂಬಂಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಮೆಟಾದ ಭಾರತದ ಮುಖ್ಯಸ್ಥರಾದ ಅರುಣ್ ಶ್ರೀನಿವಾಸ್ ಮತ್ತು ಹಲವಾರು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅಶ್ಲೀಲತೆ ಮತ್ತು ನಿಂದನೆಗೆ ಸಂಬಂಧಿಸಿದ ಅನೇಕ ಪೋಸ್ಟ್‌ಗಳು, ಕಾಮೆಂಟ್‌ಗಳನ್ನು ಪರಿಶೀಲಿಸಲಾಗುತ್ತಿದೆ.
ಪ್ರತಿಭಟನೆ ಸಮಯದಲ್ಲಿ ಪ್ರಧಾನ ಮಂತ್ರಿ ಅವರನ್ನು ಗುರಿಯಾಗಿಸಿಕೊಂಡು ನಿಂದನೀಯ ಪೋಸ್ಟ್‌ಗಳನ್ನು ಪ್ರಕಟಿಸಿದ್ದಕ್ಕಾಗಿ ದೆಹಲಿ ಪೊಲೀಸರು ಕೆಲವು ಸುದ್ದಿ ಪೋರ್ಟಲ್‌ಗಳ ಖಾತೆಗಳು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಪ್ರಧಾನಿ ಖಾತೆಯಿಂದ ಪೋಸ್ಟ್ ಮಾಡಲಾದ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ನಿರ್ಬಂಧಿಸಲಾಗಿತ್ತು. ಇದಾದ ನಂತರ ಮೆಟಾ ತಾಂತ್ರಿಕ ದೋಷದಿಂದ ಈ ತಪ್ಪಾಗಿದೆ ಎಂದು ಕ್ಷಮೆಯಾಚಿಸಿತ್ತು.








