

ಬೆಂಗಳೂರು: ನಾಳೆಯಿಂದ(ಜ.17) ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವೃತ್ತಿಪರ ಪದವಿ ಕೋರ್ಸ್‌ಗಳನ್ನು ಅಭ್ಯಾಸ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ.


ಈ ಬಾರಿಯ ಸಿಇಟಿ ಪರೀಕ್ಷೆಯು ಎ.23 ಮತ್ತು ಎ.24ರಂದು ನಡೆಯಲಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಪ್ರಾಧಿಕಾರದ ವೆಬ್ ಸೈಟ್ ಆದ https://cetonline.karnataka.gov.in/kea/ ಗೆ ಸಂಪರ್ಕಿಸಬಹುದಾಗಿದೆ.
ಎಪ್ರಿಲ್ 23ರ ಬೆಳಿಗ್ಗೆ 10:30 ರಿಂದ 11:50ರವರೆಗೆ ಭೌತಶಾಸ್ತ್ರ ಮಧ್ಯಾಹ್ನ 2:30ರಿಂದ 3:50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಎಪ್ರಿಲ್ 24ರ ಬೆಳಗ್ಗೆ 10:30 ರಿಂದ 11:50ರವರೆಗೆ ಗಣಿತಶಾಸ್ತ್ರ ಮಧ್ಯಾಹ್ನ 2:30ರಿಂದ 3:50 ರವರೆಗೆ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ.
ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಎಪ್ರಿಲ್ 22ರಂದು ಬೆಳಿಗ್ಗೆ 10:30 ರಿಂದ 11:30ರವರೆಗೆ ಬೆಂಗಳೂರು, ಬೆಳಗಾವಿ, ವಿಜಯಪುರ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ.








