






ವಿಟ್ಲ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್‌ಪೋರ್ಟ್ ಹಾಗೂ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC) ಪಡೆಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪಶ್ಚಿಮ ಬಂಗಾಳ ಮೂಲದ ಶಕ್ತಿದಾಸ್ ಹಾಗೂ ವಿಟ್ಲ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಪ್ರದೀಪ್ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಪಶ್ಚಿಮ ಬಂಗಾಳದ ನಿವಾಸಿಯಾಗಿರುವ ಶಕ್ತಿದಾಸ್ ಎಂಬ ವ್ಯಕ್ತಿ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ತೋರಿಸಿ 2025ರ ಫೆಬ್ರವರಿ ತಿಂಗಳಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಆ ಸಂದರ್ಭದಲ್ಲಿ ನಡೆದ ಪೊಲೀಸ್ ವೆರಿಫಿಕೇಶನ್‌ನಲ್ಲಿ ಅರ್ಜಿದಾರರ ವಿಳಾಸವು ದಾಖಲೆಗಳೊಂದಿಗೆ ಹೊಂದಿಕೆಯಾಗದೆ ಇರುವ ಕಾರಣ ಅರ್ಜಿಗೆ ನಾ-ಶಿಫಾರಸ್ಸು ಮಾಡಲಾಗಿತ್ತು.
ನಂತರ ಶಕ್ತಿದಾಸ್ 2025ರ ಜೂನ್ ತಿಂಗಳಲ್ಲಿ ಮರು ಅರ್ಜಿ ಸಲ್ಲಿಸಿದ್ದನು. ಈ ವೇಳೆ ವಿಟ್ಲ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಪ್ರದೀಪ್, ಅರ್ಜಿದಾರರ ವಿಳಾಸಕ್ಕೆ ಸಂಬಂಧಿಸಿದ ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಅವರಿಗೆ ಮಾಹಿತಿ ನೀಡದೇ, ಅವರ ಹೆಸರಿನಲ್ಲಿ ಸುಳ್ಳು ವರದಿ ತಯಾರಿಸಿ, ಸಹಿಯನ್ನು ಫೋರ್ಜರಿ ಮಾಡಿ, ಮೇಲಾಧಿಕಾರಿಗಳಿಂದ ಶಿಫಾರಸ್ಸು ಪಡೆದು ದಾಖಲೆಗಳನ್ನು ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಈ ಅಕ್ರಮ ಬೆಳಕಿಗೆ ಬರಬಾರದೆಂದು ಪರಿಶೀಲನಾ ದಾಖಲೆಗಳನ್ನು ನಾಶಪಡಿಸಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ.
ಡಿ.25ರಂದು ಪ್ರಕರಣ ಬೆಳಕಿಗೆ
ಡಿ.25ರಂದು ನಡೆದ ದಾಖಲೆ ಪರಿಶೀಲನೆಯ ವೇಳೆ ಈ ಅಕ್ರಮ ಕೃತ್ಯ ಬೆಳಕಿಗೆ ಬಂದಿದ್ದು, ಕೇಂದ್ರ ಸರ್ಕಾರದಿಂದ ನೀಡಲಾಗುವ ಅತ್ಯಂತ ಮಹತ್ವದ ಗುರುತಿನ ಚೀಟಿ ಪಾಸ್‌ಪೋರ್ಟ್ ಅನ್ನು ಅಪರಾಧಿ ನಂಬಿಕೆ ದ್ರೋಹದ ಮೂಲಕ ಪಡೆದುಕೊಳ್ಳಲು ಯತ್ನಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 193/2025ರ ಅಡಿಯಲ್ಲಿ
ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ಗಳು 336, 337, 316(5), 238 (2023) ರಂತೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಕಾನ್ಸ್‌ಟೇಬಲ್ ಪ್ರದೀಪ್, ಪಶ್ಚಿಮ ಬಂಗಾಳ ಮೂಲದ ಶಕ್ತಿದಾಸ್, ಎಂಬಿಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಕಾನ್ಸ್‌ಟೇಬಲ್ ಪ್ರದೀಪ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು. ನಂತರ ಪ್ರಕರಣದಲ್ಲಿ ಕಾನ್ಸ್‌ಟೇಬಲ್ ಪ್ರದೀಪ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ, ಆರೋಪಿತ ಕಾನ್ಸ್‌ಟೇಬಲ್ ಪ್ರದೀಪ್ ಅವರನ್ನು ಡಿ.22ರಿಂದ ಇಲಾಖಾ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಶಕ್ತಿದಾಸ್ ಪ್ರಸ್ತುತ ಪೊಲೀಸ್ ವಶದಲ್ಲಿದ್ದು, ವಿಚಾರಣೆ ಮುಂದುವರಿದಿದೆ.
ಶಕ್ತಿದಾಸ್ ಹಿನ್ನೆಲೆ ಪರಿಶೀಲನೆ
ಆರೋಪಿ ಶಕ್ತಿದಾಸ್‌ನ ಆಧಾರ್ ಕಾರ್ಡ್‌ನಲ್ಲಿ ಪಶ್ಚಿಮ ಬಂಗಾಳದ ವಿಳಾಸ ದಾಖಲಾಗಿದೆ. ವಿಟ್ಲ ಪೊಲೀಸ್ ಠಾಣೆಯಿಂದ ಈಗಾಗಲೇ ಆತನ ಬಂಧನದ ಮಾಹಿತಿ ಪಶ್ಚಿಮ ಬಂಗಾಳದಲ್ಲಿರುವ ಸಂಬಂಧಿಕರಿಗೆ ನೀಡಲಾಗಿದ್ದು, ಅವರು ಠಾಣೆಗೆ ಬರುವ ಸಲುವಾಗಿ ಪಶ್ಚಿಮ ಬಂಗಾಳದಿಂದ ಪ್ರಯಾಣಿಸುತ್ತಿದ್ದಾರೆ. ಪ್ರಸ್ತುತ ತನಿಖಾ ಹಂತದಲ್ಲಿ ಆರೋಪಿತನು ಬಾಂಗ್ಲಾದೇಶದ ನಾಗರಿಕನೆಂಬ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿದಿದ್ದು, ಶಕ್ತಿದಾಸ್ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.








