


ಚಿಕ್ಕಬಳ್ಳಾಪುರ: ಕಾರಿನಲ್ಲಿದ್ದ ಹಣದ ಬ್ಯಾಗ್ ಎಗರಿಸಿ ಪರಾರಿಯಾಗುತ್ತಿದ್ದ ಕಳ್ಳರನ್ನು ಸಾರ್ವಜನಿಕರು ಹಿಡಿದು, ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಹೊರವಲಯದ ಕೆ.ವಿ. ಕ್ಯಾಂಪಸ್ ಹಾಗೂ ಹೂವಿನ ಮಾರುಕಟ್ಟೆ ಸಮೀಪ ನಡೆದಿದೆ.
ಆಂಧ್ರಪ್ರದೇಶದ ತಿರುಪತಿ ಮೂಲದ ರಮೇಶ್-ಉಷಾ ಎಂಬ ದಂಪತಿ ಬೆಂಗಳೂರಿನಲ್ಲಿ ದೊಡ್ಡಮ್ಮನ ಮಗಳ ಮದುವೆಗೆ ಹಣ ಕೊಡಲು P6 ಲಕ್ಷ ಹಣ ಕಾರಿನಲ್ಲಿ ತರುತ್ತಿದ್ದರು.
ತಿರುಪತಿಯಿಂದ ನೇರವಾಗಿ ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆ ಸಮೀಪ ಬಂದು ಮರಳುವಾಗ ಊಟಕ್ಕೆಂದು ಹೋಟೆಲ್ ಬಳಿ ಕಾರು ನಿಲ್ಲಿಸಿದ್ದರು. ಆ ವೇಳೆ ಬಂದ ಮೂವರು ಅಪರಿಚಿತ ಯುವಕರು ನಾಲ್ಕೈದು ಜನರ ತಂಡವು ಕಾರಿನಲ್ಲಿದ್ದ ಅಂದಾಜು 6 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗನ್ನು ಕಿತ್ತುಕೊಂಡು ಓಡಿದ್ದಾರೆ ಎನ್ನಲಾಗಿದೆ.
ದಂಪತಿಯ ಕೂಗಾಟ ಕೇಳಿದ ಹೂವಿನ ಮಾರುಕಟ್ಟೆ ಸಿಬ್ಬಂದಿ, ರೈತರು ಮತ್ತು ಕೆ.ವಿ. ಕ್ಯಾಂಪಸ್ ವಿದ್ಯಾರ್ಥಿಗಳು ಕಳ್ಳರನ್ನು ಅಟ್ಟಾಡಿಸಿ ಇಬ್ಬರನ್ನು ಹಿಡಿದುಕೊಟ್ಟು, ಸಿಕ್ಕಿಬಿದ್ದ ಕಳ್ಳರನ್ನು ಸ್ಥಳೀಯರು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ವಿಷಯ ತಿಳಿದ ನಂದಿ ಗಿರಿಧಾಮ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಹಣದ ಬ್ಯಾಗ್‌ನೊಂದಿಗೆ ಪರಾರಿಯಾಗಿರುವ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








