




ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಪುಟ್ಟ ಮಕ್ಕಳ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಾಲಕ್ಕಾಡ್ ಜಿಲ್ಲೆಯ ಪುದುಶೇರಿ ಪ್ರದೇಶದಲ್ಲಿ ರವಿವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ.
ಸುಮಾರು 13 ವರ್ಷದೊಳಗಿನ 25ಕ್ಕೂ ಹೆಚ್ಚು ಮಕ್ಕಳು ಕ್ರಿಸ್ಮಸ್ ಕ್ಯಾರಲ್ಸ್ ಕಾರ್ಯಕ್ರಮದ ಅಂಗವಾಗಿ ಮನೆಮನೆಗೆ ತೆರಳಿ ಹಾಡು ಹಾಡುತ್ತಾ ಸಂಭ್ರಮಿಸುತ್ತಿದ್ದರು. ಈ ವೇಳೆ ಅಶ್ವಿನ್ ರಾಜ್ ಎಂಬ ಬಿಜೆಪಿ ಕಾರ್ಯಕರ್ತ ಹಾಗೂ ಆತನ ಸಹಚರರು ಮಕ್ಕಳ ತಂಡದ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮಕ್ಕಳು ಕ್ಯಾರಲ್ಸ್ ಹಾಡಲು ಬಳಸುತ್ತಿದ್ದ ಬ್ಯಾಂಡ್ ಸೆಟ್ ಸ್ಥಳೀಯ ಸಿಪಿಐಎಂ ಕಚೇರಿಯದ್ದಾಗಿದ್ದು, ಅದರ ಮೇಲೆ CPIM ಎಂದು ಬರೆಯಲಾಗಿತ್ತು. ಇದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತರ ಗುಂಪು, “ನಿಮಗೆ ಹಣ ಕೊಡುತ್ತೇವೆ, ಬನ್ನಿ” ಎಂದು ಮಕ್ಕಳನ್ನು ಕರೆದುಕೊಂಡು ಹೋಗಿ ನಿರ್ಜನ ಸ್ಥಳದಲ್ಲಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯ ವೇಳೆ ಮಕ್ಕಳು ಬಳಸುತ್ತಿದ್ದ ಬ್ಯಾಂಡ್ ಸೆಟ್ ಅನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಕಸಬಾ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಮುಖ್ಯ ಆರೋಪಿ ಬಿಜೆಪಿ ಕಾರ್ಯಕರ್ತ ಅಶ್ವಿನ್ ರಾಜ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಯತ್ನ ಸೇರಿದಂತೆ ಗಂಭೀರ ಆರೋಪಗಳಡಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಹಲ್ಲೆಗೆ ಒಳಗಾದ ಬಾಲಕನೊಬ್ಬ ಮಾಧ್ಯಮದೊಂದಿಗೆ ಮಾತನಾಡುತ್ತಾ,
“ನಾವು ಕೇವಲ ಕ್ರಿಸ್ಮಸ್ ಸಂಭ್ರಮಕ್ಕಾಗಿ ಬ್ಯಾಂಡ್ ಬಳಸಿದ್ದೆವು. ಅದರಲ್ಲಿ ಸಿಪಿಎಂ ಎಂದು ಬರೆದಿರುವುದನ್ನು ನೋಡಿ ನಮ್ಮನ್ನು ಕರೆದುಕೊಂಡು ಹೋಗಿ ಹೊಡೆದರು”
ಎಂದು ನೋವು ತೋಡಿಕೊಂಡಿದ್ದಾನೆ.
ಈ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಸ್ಥಳೀಯ ಸಿಪಿಐಎಂ ನಾಯಕರು, “ನಮ್ಮ ಕಚೇರಿಯಲ್ಲಿದ್ದ ಬ್ಯಾಂಡ್ ಸೆಟ್ ಅನ್ನು ಮಕ್ಕಳು ಕೇಳಿದಾಗ ಪ್ರೀತಿಯಿಂದ ನೀಡಿದ್ದೆವು. ರಾಜಕೀಯದ ಅರಿವೇ ಇಲ್ಲದ ಪುಟ್ಟ ಮಕ್ಕಳ ಮೇಲೆ ಹಲ್ಲೆ ನಡೆಸಿರುವುದು ಬಿಜೆಪಿ ಕಾರ್ಯಕರ್ತರ ಕ್ರಿಮಿನಲ್ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ರಾಜ್ಯದಾದ್ಯಂತ ತೀವ್ರ ಖಂಡನೆಗೆ ಕಾರಣವಾಗಿದ್ದು, ಮಕ್ಕಳ ಮೇಲಿನ ಹಿಂಸಾಚಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ.








