

ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ಬೆಡ್ ಸಿಗದೇ ವಿಕ್ಟೋರಿಯಾ ಆಸ್ಪತ್ರೆ ಎದುರು ಮಹಿಳೆ ನರಳಿ ನರಳಿ ಪ್ರಾಣಬಿಟ್ಟ ಅಮಾನವೀಯ ಘಟನೆ ನಡೆದಿದೆ. ಉಸಿರಾಟ ತೊಂದರೆಯಿದ್ದ ಮಹಿಳೆ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆ ಬಂದಿದ್ದರು. ಆದರೆ ಸಿಬ್ಬಂದಿ ಮಹಿಳೆಯನ್ನು ಆಸ್ಪತ್ರೆ ಒಳಗೆ ಸೇರಿಸಿಕೊಳ್ಳದ ಹಿನ್ನಲೆ ಗೇಟ್ ಮಂದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೊದಲು ಅವರಿಗೆ ಉಸಿರಾಟ ತೊಂದರೆ ಹಿನ್ನಲೆ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಕೊರೊನಾ ಎಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಹೀಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಆದರೆ ಕಿಮ್ಸ್, ದೇವನಹಳ್ಳಿಯ ಆಕಾಶ್,ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ ಅಂತ ಕುಟುಂಬಸ್ಥರು ದೂರಿದ್ದಾರೆ.

ಹೀಗಾಗಿ ಉಸಿರಾಟದ ತೊಂದರೆಯಿಂದ ನರಳಿ ನರಳಿ ಮಹಿಳೆ ಮುಂಜಾನೆ 4 ಗಂಟೆ ಸುಮಾರಿಗೆ ಪ್ರಾಣಬಿಟ್ಟಿದ್ದಾರೆ. ಇನ್ನು ಬದುಕಿದ್ದಾಗ ಬೆಡ್ ಇಲ್ಲ ಎಂದು ಹೇಳಿದ ಸಿಬ್ಬಂದಿ, ಮಹಿಳೆ ಸಾವನ್ನಪ್ಪಿದ ಬಳಿಕ ಶವವನ್ನು ಕೋವಿಡ್ ಟೆಸ್ಟ್ ಗೆ ರವಾನಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
