ದೇಶದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಕೋಟಿಗೂ ಅಧಿಕ ಲಸಿಕೆ ಡೋಸ್ಗಳ ಸಂಗ್ರಹವಿದೆ. ಹಾಗೂ ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿ 57,70,000 ಡೋಸ್‌ಗಳನ್ನ ಸ್ವೀಕರಿಸಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 15,95,96,140 ಡೋಸ್‌ಗಳನ್ನ ಉಚಿತವಾಗಿ ನೀಡಿದೆ. 1 ಕೋಟಿಗೂ ಹೆಚ್ಚು ಕೋವಿಡ್ 19 ಲಸಿಕೆಗಳು ಅಥವಾ 1,06,19,892 ಡೋಸ್ ಲಸಿಕೆಗಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಸಚಿವಾಲಯ ಹೇಳಿದೆ.
ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 57,70,000 ಕೋವಿಡ್ ಲಸಿಕಾ ಡೋಸ್‌ಗಳನ್ನ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಲಸಿಕೆಗಳು ಸಂಪೂರ್ಣ ಖಾಲಿಯಾಗಿವೆ. ಇದರಿಂದ ಲಸಿಕೆ ಅಭಿಯಾನಕ್ಕೆ ಹೊಡೆತ ಬೀಳಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಕೇಂದ್ರ ಸಚಿವಾಲಯ ಈ ಮಾಹಿತಿ ನೀಡಿದೆ.ಏಪ್ರಿಲ್ 28ರಂದು ಮಹಾರಾಷ್ಟ್ರ ಒಟ್ಟು 1,58,62,470 ಕೋವಿಡ್ ಡೋಸ್‌ಗಳನ್ನ ಸ್ವೀಕಾರ ಮಾಡಿದೆ. ಇದರಲ್ಲಿ ವ್ಯರ್ಥವಾದ ಲಸಿಕೆಯೂ ಸೇರಿದಂತೆ ಒಟ್ಟು 1,53,56,151 ಲಸಿಕೆಗಳನ್ನ ಬಳಕೆ ಮಾಡಲಾಗಿದೆ. ಈ ಲೆಕ್ಕಾಚಾರದ ಪ್ರಕಾರ ಮಹಾರಾಷ್ಟ್ರದ ಬಳಿ ಇನ್ನೂ 5,06,319 ಲಸಿಕಾ ಡೋಸ್ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿ ಲಸಿಕೆಗಳನ್ನ ಕಳುಹಿಸಲಾಗುತ್ತೆ ಎಂದು ಸಚಿವಾಲಯ ಹೇಳಿದೆ.
ದೆಹಲಿ ಕೂಡ 36,90,710 ಲಸಿಕೆಗಳನ್ನ ಸ್ವೀಕಾರ ಮಾಡಿದೆ. ವ್ಯರ್ಥವಾದ ಡೋಸ್ ಸೇರಿದಂತೆ 32,43,300 ಲಸಿಕಾ ಡೋಸ್‌ಗಳು ಖಾಲಿಯಾಗಿದೆ. ಇದಾದ ಬಳಿಕವೂ ದೆಹಲಿಯಲ್ಲಿ 4,47,410 ಡೋಸ್ ಇನ್ನೂ ಲಭ್ಯವಿದೆ. ಶೀಘ್ರದಲ್ಲೇ ದೆಹಲಿಗೆ 1,50,000 ಡೋಸ್‌ಗಳನ್ನ ಕಳುಹಿಸಿಕೊಡಲಾಗುತ್ತೆ ಎಂದು ಮಾಹಿತಿ ನೀಡಿದೆ.
ಅದೇ ರೀತಿ ಕರ್ನಾಟಕಕ್ಕೂ 94,47,900 ಡೋಸ್ ಲಸಿಕೆಗಳನ್ನ ಕಳುಹಿಸಿಕೊಡಲಾಗಿದೆ. ಇದರಲ್ಲಿ ವ್ಯರ್ಥವಾದ ಲಸಿಕೆ ಸೇರಿ 91,01,215 ಡೋಸ್ ಖಾಲಿಯಾಗಿದೆ. ಆದ್ದರಿಂದ ರಾಜ್ಯದ ಬಳಿ ಇನ್ನೂ 3,46,685 ಡೋಸ್ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ 4,00,000 ಲಸಿಕಾ ಡೋಸ್‌ಗಳನ್ನ ಪೂರೈಕೆ ಮಾಡಲಾಗುತ್ತೆ ಎಂದು ಸಚಿವಾಲಯ ತಿಳಿಸಿದೆ.