Monday, June 15, 2026
spot_imgspot_img
spot_imgspot_img

ಗರ್ಭಿಣಿಗೆ ನೀಡಿದ್ದ ಅಂಗನವಾಡಿ ಪೌಷ್ಟಿಕ ಆಹಾರದಲ್ಲಿ ಸತ್ತ ಹಾವಿನ ಮರಿ ಪತ್ತೆ..!

- Advertisement -
- Advertisement -

ಭೋಪಾಲ್: ಮಧ್ಯಪ್ರದೇಶದ ಪಾಂಡುರ್ಣ ಜಿಲ್ಲೆಯ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಗೆ ನೀಡಿದ್ದ ಪೌಷ್ಟಿಕ ಆಹಾರದ ಪ್ಯಾಕೆಟ್‌ ಒಳಗಡೆ ಸತ್ತ ಹಾವಿನ ಮರಿ ಪತ್ತೆಯಾಗಿರುವ ಘಟನೆ ತಿಳಿದುಬಂದಿದೆ.

ಕಾರ್ಘಾಟ್ ಕಮಠಿ ಗ್ರಾಮದ ಗರ್ಭಿಣಿ ವಚಲಾ ಬಾಯಿ ಧುರ್ವೆ ಅವರಿಗೆ ಅಂಗನವಾಡಿ ಕೇಂದ್ರದಿಂದ ಪೌಷ್ಟಿಕ ಆಹಾರದ ಲಡ್ಡುಗಳ ಪ್ಯಾಕೆಟ್ ನೀಡಲಾಗಿತ್ತು. ಅದೃಷ್ಟವಶಾತ್ ಅವರು ಆಹಾರವನ್ನು ಸೇವಿಸಿರಲಿಲ್ಲ. ಮನೆಗೆ ತೆಗೆದುಕೊಂಡು ಹೋಗಿ ಪ್ಯಾಕೆಟ್ ತೆರೆದಾಗ ಅದರೊಳಗೆ ಸತ್ತ ಹಾವಿನ ಮರಿ ಕಂಡುಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಅಂಗನವಾಡಿ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದು, ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಆಹಾರದ ಪ್ಯಾಕೆಟ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನಾ ವರದಿ ಸಿದ್ಧಪಡಿಸಿದ್ದಾರೆ. ಅಲ್ಲದೆ, ಆಹಾರದ ಮಾದರಿಯನ್ನು ಪರೀಕ್ಷೆಗಾಗಿ ಸಂರಕ್ಷಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಆಹಾರದ ಮಾದರಿಯನ್ನು ಭೋಪಾಲ್‌ನ ರಾಜ್ಯ ಆಹಾರ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ವಿತರಿಸುವ ಪೌಷ್ಟಿಕ ಆಹಾರದ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ. ತನಿಖಾ ವರದಿ ಬರುವವರೆಗೆ ವದಂತಿಗಳಿಗೆ ಕಿವಿಗೊಡಬಾರದು ಎಂಬುದಾಗಿ ಆಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!