ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದಲ್ಲಿರುವ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದೇಲಂತಬೆಟ್ಟು ಶಾಲೆಗೆ ಜು. 27 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ-2024 ನ್ನು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ನ ಸಂಸ್ಥಾಪಕ ಸದ್ಗುರು ಶ್ರೀಮಧುಸೂದನ್ ಸಾಯಿ ಅವರು ಪ್ರದಾನ ಮಾಡಿದರು.
ಶಾಲೆಯ ಮುಖ್ಯ ಶಿಕ್ಷಕಿ ಸವಿತಾರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಕರ್ನಾಟಕ ರಾಜ್ಯದಲ್ಲಿ ಆಯ್ದ 120 ಶಾಲೆಗಳ ಪೈಕಿ ದೇಲಂತಬೆಟ್ಟು ಶಾಲೆ ಆಯ್ಕೆಯಾಗಿರುವುದು ಬಂಟ್ವಾಳ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.
ಪ್ರಶಸ್ತಿಯು ಸನ್ಮಾನ ಪತ್ರ ಹಾಗೂ ಶಾಲೆಯ ಹಸಿರು ವನದ ಅಭಿವೃದ್ಧಿಗೆ 10,000 ರೂಗಳ ಚೆಕ್ ನ್ನು ಒಳಗೊಂಡಿದೆ. ಮಾತ್ರವಲ್ಲದೆ ಮಕ್ಕಳಿಗಾಗಿ ಮೌಲ್ಯ ಶಿಕ್ಷಣ ಆಧಾರಿತ ಪುಸ್ತಕಗಳು, ಚಾಕಲೇಟ್‌ಗಳು, ಶಿಕ್ಷಕರಿಗೆ ಡೈರಿ ಹಾಗೂ ಮುಖ್ಯ ಶಿಕ್ಷಕರಿಗೆ ಕೈಗಡಿಯಾರವನ್ನು ಪ್ರಶಸ್ತಿಯೊಂದಿಗೆ ನೀಡಿರುತ್ತಾರೆ.