


ಸರ್ಕಾರಿ ಆವರಣದಲ್ಲಿ ಖಾಸಗಿ ಸಂಘಟನೆಗಳು ಕಾರ್ಯಕ್ರಮ ನಡೆಸಬೇಕು ಎಂದರೆ ಅನುಮತಿ ಪಡೆಯಬೇಕೆಂಬ ಸರ್ಕಾರದ ನಿರ್ಧಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಆಸ್ತಿಗಳು, ಪಾರ್ಕ್‌ಗಳು, ಶಾಲೆಗಳು, ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಅಥವಾ ಸಮೂಹಗಳು ಚಟುವಟಿಕೆಗಳನ್ನು ನಡೆಸಲು ಮುಂಚಿತವಾಗಿ ಅನುಮತಿ ಪಡೆಯಬೇಕು ಎಂಬ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲಾಗಿದ್ದು, ಇದೀಗ ಮಹತ್ವದ ನಿರ್ಧಾರ ಹೊರಡಿಸಿದೆ.
ಖಾಸಗಿ ಸಂಘಟನೆಗಳು, ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು ಎಂಬ ಸರ್ಕಾರದ ಆದೇಶ ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಚಟುವಟಿಕೆಗಳನ್ನು ಗುರಿಯಾಗಿಸುವಂತೆ ಇತ್ತು. ಹೀಗಾಗಿ ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದರು, ಇದೀಗ ಧಾರವಾಡ ಪೀಠ ಮಹತ್ವದ ಸೂಚನೆ ಹೊರಡಿಸಿದೆ.
ಸರ್ಕಾರದ ಈ ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕು ಎಂಬ ಆದೇಶದ ವಿರುದ್ಧ ಧಾರವಾಡ ಕೋರ್ಟ್ನಲ್ಲಿ ಕೇಸ್ ಸಲ್ಲಿಕೆಯಾಗಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದ್ದು, ಇದು ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.
ಪುನಶ್ಚೇತನ ಸೇವಾ ಸಂಸ್ಥೆ ಎಂಬ ಖಾಸಗಿ ಸಂಘಟನೆ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಪಿಟಿಷನ್ ಸಲ್ಲಿಸಿತ್ತು. ಸಂಸ್ಥೆಯ ಪ್ರಕಾರ, ಈ ಆದೇಶ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಗುರಿಯಾಗಿಸಿ ಮಾಡಲು ರೂಪಿಸಲಾಗಿದ್ದು, ಇದು ಸಂವಿಧಾನದ ಮೂಲಭೂತ ಹಕ್ಕುಗಳನ್ನು (ಭಾಷಣ ಸ್ವಾತಂತ್ರ್ಯ, ಸಂಘ ರಚನೆ) ಉಲ್ಲಂಘಿಸುತ್ತದೆ. ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಪ್ರತಿವಾದಿಯಾಗಿ ಮಾಡಿ ಸಂಸ್ಥೆ ಹೈಕೋರ್ಟ್ ಮೇಟ್ಟಿಲೇರಿತ್ತು. ಇದು RSS ಬ್ಯಾನ್ ಚರ್ಚೆಯ ಹಿನ್ನೆಲೆಯಲ್ಲಿದ್ದು, ಖಾಸಗಿ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ಆದೇಶವು ರಾಜಕೀಯ ದ್ವೇಷದಿಂದ ಬಂದಿದೆ ಎಂದು ಆರೋಪಿಸಲಾಗಿದೆ.
ಧಾರವಾಡ ಹೈಕೋರ್ಟ್‌ನಲ್ಲಿ ಇಂದು (ಅಕ್ಟೋಬರ್ 28, 2025) ವಿಚಾರಣೆ ನಡೆಯಿತು. ನ್ಯಾಯಮೂರ್ತಿ ಪೀಠ ಆದೇಶಕ್ಕೆ ತಡೆಯಾಜ್ಞೆ ನೀಡಿ, ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ. ಸರ್ಕಾರದ ವಕೀಲರಿಗೆ ನಾಳೆ (ಅಕ್ಟೋಬರ್ 29) ತಕರಾರು ಸಲ್ಲಿಸಲು ಸೂಚನೆ ನೀಡಲಾಗಿದೆ. ಈ ಆದೇಶವು RSS ಚಟುವಟಿಕೆಗಳನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿದೆ ಎಂದು ಸಂಸ್ಥೆ ವಾದಿಸಿದೆ. ಹೈಕೋರ್ಟ್ ಈ ವಾದವನ್ನು ಗಂಭೀರವಾಗಿ ಪರಿಗಣಿಸಿ ತಡೆ ನೀಡಿದ್ದು, ಆದೇಶದ ಜಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ರಾಜ್ಯ ಸರ್ಕಾರದ ಆದೇಶವು ಇತ್ತೀಚಿನ RSS ಬ್ಯಾನ್ ಚರ್ಚೆಯ ಹಿನ್ನೆಲೆಯಲ್ಲಿದೆ. ಸಚಿವ ಪ್ರಿಯಾಂಕ್ ಖರ್ಗೆ RSS ಚಟುವಟಿಕೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧಿಸುವಂತೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಸರ್ಕಾರಿ ಆಸ್ತಿಗಳನ್ನು ಬಳಸುವ ಖಾಸಗಿ ಸಂಘಟನೆಗಳಿಗೆ ಮುಂಚಿತವಾಗಿ ಅನುಮತಿ ಕಡ್ಡಾಯಗೊಳಿಸುವ ಆದೇಶ ಹೊರಡಿಸಲಾಯಿತು. ಆದೇಶದಲ್ಲಿ, “ಸರ್ಕಾರಿ ಆಸ್ತಿಯನ್ನು (ಭೂಮಿ, ಕಟ್ಟಡ, ಪಾರ್ಕ್, ಆಟದ ಮೈದಾನ, ನೀರು ತಡೆಗಳು) ಬಳಸಲು ಸಂಬಂಧಿತ ಅಧಿಕಾರಿಯಿಂದ ಮುಂಚಿತವಾಗಿ ಅನುಮತಿ ಪಡೆಯಬೇಕು” ಎಂದು ಉಲ್ಲೇಖಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1963ರಡಿ ಅಧಿಕಾರಿಗಳು ನಿಯಂತ್ರಣಕ್ಕೆ ಶಕ್ತಿ ಹೊಂದಿರುವುದಾಗಿ ಹೇಳಲಾಗಿದೆ.
ಆದರೆ ಪುನಶ್ಚೇತನ ಸೇವಾ ಸಂಸ್ಥೆ ವಾದ ಎಂದರೆ, ಈ ಆದೇಶ ಸಂವಿಧಾನದ 19(1)(a) (ಭಾಷಣ ಸ್ವಾತಂತ್ರ್ಯ) ಮತ್ತು 19(1)(c) (ಸಂಘ ರಚನೆ) ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದು RSSನಂತಹ ಸಂಘಟನೆಗಳ ಚಟುವಟಿಕೆಗಳನ್ನು ಗುರಿಯಾಗಿಸಿ, ರಾಜಕೀಯ ದ್ವೇಷದಿಂದ ಬಂದಿದೆ ಎಂದು ಆರೋಪಿಸಿದ್ದಾರೆ. ಹೈಕೋರ್ಟ್ ತಡೆಯಾಜ್ಞೆಯಿಂದ ಆದೇಶದ ಜಾರಿ ನಿಲ್ಲಿಸಲ್ಪಟ್ಟಿದ್ದು, ಸಂಸ್ಥೆ ಸಂತೋಷಪಡುತ್ತಿದೆ. RSS ಬೆಂಬಲಿಗರೂ ಇದನ್ನು ಸ್ವಾಗತಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶಕ್ಕೆ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ, ಗೃಹ ಇಲಾಖೆ, ಹುಬ್ಭಳ್ಳಿ ಕಮಿಷನರ್ ಗೆ ಹೈಕೋರ್ಟ್ ನೋಟಿಸ್ ನೀಡಿದೆ, ಅ.18, 2025 ರ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿರುವ ಸಂಸ್ಥೆ, ಅನುಮತಿಯಿಲ್ಲದೇ 10 ಜನ ಸೇರಿದರೆ ಅಪರಾಧವೆಂದು ಸರ್ಕಾರದ ಆದೇಶದಲ್ಲಿದೆ. ರಸ್ತೆ, ಪಾರ್ಕ್, ಮೈದಾನ, ಕೆರೆ ಇತ್ಯಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಪೊಲೀಸ್ ಕಾಯ್ದೆಯಲ್ಲಿ ಇರುವ ಅಧಿಕಾರವನ್ನು ಸರ್ಕಾರ ಆದೇಶದ ಮೂಲಕ ಚಲಾಯಿಸಿದೆ. ಸಂವಿಧಾನದ ಆರ್ಟಿಕಲ್ 19 (1)A, B, ನೀಡಿರುವ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದೆ ಎಂದು ಆರೋಪಿಸಿದೆ. ಇದಕ್ಕೆ ಸಂವಿಧಾನ ನೀಡಿರುವ ಹಕ್ಕನ್ನು ಸರ್ಕಾರಿ ಆದೇಶ ಕಿತ್ತುಕೊಳ್ಳಲಾಗದು ಎಂದು ಹೈಕೋರ್ಟ್ ಪೀಠ ಹೇಳಿದೆ.








