



ಉದ್ಯಮಿಯೋರ್ವರಿಗೆ ಬಹುಕೋಟಿ ವಂಚಿಸಿದ ಆರೋಪದಡಿ ಬಂಧಿನದಲ್ಲಿರುವ ಚೈತ್ರಾ ಕುಂದಾಪುರ ಸಿಸಿಬಿ ವಿಚಾರಣೆ ಸಂದರ್ಭ ಪ್ರಜ್ಞೆ ತಪ್ಪಿ ಕುಸಿದು ಬಿದ್ದು, ಕಳೆದ ಮೂರು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಸತತ ವೈದ್ಯಕೀಯ ತಪಾಸಣೆ ನಂತರ ಎಲ್ಲಾ ವರದಿಗಳು ನಾರ್ಮಲ್ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದು, ಅಲ್ಲಿಂದ ನೇರವಾಗಿ ಪೊಲೀಸರು ಸಿಸಿಬಿ ಕಚೇರಿಗೆ ಕರೆತಂದಿದ್ದಾರೆ. ಚೈತ್ರಾಳ ತಲೆ ಹಾಗೂ ಮುಖಕ್ಕೆ ಮಾಸ್ಕ್ ಕಟ್ಟಿಸಿ ಆಸ್ಪತ್ರೆ ಹಿಂಬಾಗಿಲಿನಿಂದ ಪೊಲೀಸರು ಕರೆ ತಂದಿದ್ದಾರೆ. ಇಂದಿನಿಂದಲೇ ಎಲ್ಲಾ ಹಂತದ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಐದಾರು ದಿನಗಳ ಕಾಲ ಕಸ್ಟಡಿಯಲ್ಲಿ ವಿಚಾರಣೆ ನಡೆಸಿ, ನಂತರ ಸ್ಥಳ ಮಹಜರು ನಡೆಸಬೇಕು. ಬಳಿಕ ಉಳಿದ ಆರೋಪಿಗಳನ್ನೂ ಚೈತ್ರಾಳ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಉದ್ಯಮಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರಳನ್ನು ಸಿಸಿಬಿ ಪೊಲೀಸರು ಸೆಪ್ಟೆಂಬರ್ 15 ರಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದರು. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಳು. ತಕ್ಷಣವೇ ಆಕೆಯನ್ನ ವಿಕ್ಟೋರಿಯಾ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿತ್ತು.