Monday, May 6, 2024
spot_imgspot_img
spot_imgspot_img

ಸಿದ್ದರಾಮಯ್ಯ v/s ಡಿಕೆಶಿ; ಕಾಂಗ್ರೆಸ್ ಹೈಕಮಾಂಡ್‌ಗೆ ಬಿಗ್‌ ಟೆನ್ಷನ್ -ಇಂದು ಹೊಸ ಸಿಎಂ ಘೋಷಣೆ ಸಾಧ್ಯತೆ

- Advertisement -G L Acharya panikkar
- Advertisement -
vtv vitla

ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಪ್ರಬಲ ಪೈಪೋಟಿ ಮುಂದುವರಿದಿದ್ದು, ಇಬ್ಬರೂ ನಾಯಕರು ಉನ್ನತ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದಿರುವುದರಿಂದ ಮಂಗಳವಾರವೂ ಅಂತಿಮ ತೀರ್ಮಾನಕ್ಕೆ ಬರಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಾಧ್ಯವಾಗಿಲ್ಲ.

ಮಂಗಳವಾರ ಮಧ್ಯಾಹ್ನ ದೆಹಲಿಗೆ ಬಂದ ಡಿಕೆ ಶಿವಕುಮಾರ್ ಸಂಜೆ ಐದು ಗಂಟೆ ವೇಳೆ ಖರ್ಗೆ ನಿವಾಸಕ್ಕೆ ತೆರಳಿದರು. ಕೊಟ್ಟರೆ ಸಿಎಂ ಸ್ಥಾನ ಕೊಡಿ. ಇಲ್ಲವಾದಲ್ಲಿ ನನಗೆ ಯಾವುದೇ ಅಧಿಕಾರ ಬೇಡ. ಬರೀ ಶಾಸಕನಾಗಿ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿ ಬಂದಿದ್ದಾರೆ.

‘ಮೊದಲ 3 ವರ್ಷ ನನ್ನನ್ನು ಸಿಎಂ ಮಾಡಿ. 2 ವರ್ಷ ಸಿದ್ದರಾಮಯ್ಯ ಅವರಿಗೆ ನೀಡಿ. ಆಗ ನಾನು ಸಂಘಟನೆ ಕಡೆ ಮರಳುತ್ತೇನೆ. ಜೈಲಿನಿಂದ ಬಂದು ಸವಾಲಿನ ಸನ್ನಿವೇಶದಲ್ಲಿ ಪಕ್ಷ ಬಲಗೊಳಿಸಿದ್ದು ನಾನು. ನಾನು ಎಲ್ಲಾ ಕಡೆ ಪ್ರವಾಸ ಮಾಡಿ, ಪಕ್ಷದ ಪರ ವಾತಾವರಣ ರೂಪಿಸಿದೆ. ಆದರೆ, ಸಿದ್ದರಾಮಯ್ಯ ಸಂಘಟನೆಗಾಗಿ ಏನು ಮಾಡಿದ್ದಾರೆ? ಈಗಾಗಲೇ ಸಿಎಂ ಸ್ಥಾನದಲ್ಲಿದ್ದು ಸಿದ್ದರಾಮಯ್ಯ 5 ವರ್ಷ ಅಧಿಕಾರ ಅನುಭವಿಸಿದ್ದಾರೆ. ಕಳೆದ 4 ವರ್ಷ ಪ್ರತಿಪಕ್ಷ ನಾಯಕ ಆಗಿದ್ದರು. ಆಗ ನಾವು ಅವರ ವಿರುದ್ಧ ಏನೂ ಮಾತನಾಡದೇ ಕೆಲಸ ಮಾಡಲು ಸಹಕಾರ ನೀಡಲಿಲ್ಲವೇ? ಸಿದ್ದರಾಮಯ್ಯ ನನ್ನಷ್ಟು ರಾಜ್ಯ ಪ್ರವಾಸ ಮಾಡಿಲ್ಲ. ಅವರಿಗೆ ಸರಿಯಾಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲೂ ಸಾಧ್ಯ ಆಗಲಿಲ್ಲ. ಕೋಲಾರ ವಿಷಯದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಿದ್ದರು’ ಎಂದು ಡಿಕೆ ಶಿವಕುಮಾರ್ ವಾದ ಮಂಡಿಸಿದರು.

ಬಳಿಕ, ಸಿದ್ದರಾಮಯ್ಯ ಅವರನ್ನೂ ಕರೆಸಿಕೊಂಡ ಖರ್ಗೆ, ಅವರ ಅಭಿಪ್ರಾಯಗಳನ್ನು ಆಲಿಸಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂದು ಮೊದಲೇ ಹೇಳಿದ್ದೆ. ಮತ್ತೊಂದು ಅವಕಾಶ ನೀಡಿದರೆ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಬಲ್ಲೆ. ಮೇಲಾಗಿ, ಶಾಸಕರು ನನ್ನ ಬೆಂಬಲಕ್ಕೆ ನಿಂತಿರುವಾಗ ಅದನ್ನೇ ಅಂತಿಮ ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.

‘ನನಗೆ ಸಿಎಂ ಸ್ಥಾನ ಕೊಟ್ಟರೆ 5 ವರ್ಷ ಸಂಪೂರ್ಣ ಕೊಡಿ. ಡಿಕೆಶಿಯನ್ನು ಬೇಕಿದ್ದರೆ ಡಿಸಿಎಂ ಮಾಡಿ. ಪಕ್ಷಕ್ಕಾಗಿ ನಾನೂ ದುಡಿದಿದ್ದೇನೆ. ಅಲ್ಪಸಂಖ್ಯಾತ, ಹಿಂದುಳಿದ, ದಲಿತ, ಲಿಂಗಾಯತ ಸೇರಿ ವಿವಿಧ ಸಮುದಾಯಗಳ ಬೆಂಬಲ ಸಿಗುವುದಕ್ಕೆ ನನ್ನ ಕೊಡುಗೆ ಇದೆ. ಹೀಗಿರುವಾಗ ನನಗೆ ಅವಕಾಶ ನೀಡದಿದ್ದರೆ ಕಾರ್ಯರ್ತರು, ಬೆಂಬಲಿಗರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ, ಸಿಎಂ ಆಗಿದ್ದಾಗ, ವಿಪಕ್ಷ ನಾಯಕ ಆಗಿದ್ದಾಗ ಮಾಡಿರುವ ಸಾಧನೆ ನೋಡಿ. ಡಿಕೆಶಿ ಮೇಲೆ ಭ್ರಷ್ಟಾಚಾರ ಪ್ರಕರಣವಿದ್ದು, ಅವಕಾಶ ಕೊಟ್ಟರೆ ಬಿಜೆಪಿಯವರಿಗೆ ಅಸ್ತ್ರ ಕೊಟ್ಟಂತೆ ಆಗಲಿದೆ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ಇದಕ್ಕೂ ಮುನ್ನ ಬೆಳಗ್ಗೆ ಖರ್ಗೆ ನಿವಾಸಕ್ಕೆ ಆಗಮಿಸಿದ ರಾಹುಲ್ ಗಾಂಧಿ, ನಾಯಕತ್ವ ವಿಷಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ವಾಸ್ತವ ವರದಿಯನ್ನು ಪಡೆದುಕೊಂಡಿದ್ದಾರೆ. ಕರ್ನಾಟಕ ಮತ್ತೊಂದು ರಾಜಸ್ಥಾನ ಅಥವಾ ಛತ್ತೀಸ್​ಗಢ ಆಗಬಾರದು. ಹೀಗಾಗಿ, ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರನ್ನೂ ಸರಿದೂಗಿಸಿಕೊಂಡು ಹೋಗುವ ಸೂತ್ರ ಕಂಡುಕೊಳ್ಳಿ ಎಂದು ಸಲಹೆ ನೀಡಿದರೆನ್ನಲಾಗಿದೆ.

ಮುಖ್ಯಮಂತ್ರಿ ಸ್ಥಾನವನ್ನು ಎರಡು ಅವಧಿಗೆ ಹಂಚಿಕೆ ಮಾಡುವ ಸೂತ್ರವನ್ನು ಹೈಕಮಾಂಡ್ ಸಿದ್ದರಾಮಯ್ಯ ಮುಂದಿಟ್ಟಿದೆ. ಇದಕ್ಕೆ ಸಿದ್ದರಾಮಯ್ಯ ಒಪ್ಪಿಲ್ಲ. ನೀವು ಬೇಕಿದ್ದರೆ ಡಿಕೆಶಿಯನ್ನು ಡಿಸಿಎಂ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಜತೆಗೆ ತಮಗೇಕೆ ಸಿಎಂ ಸ್ಥಾನ ಕೊಡಬೇಕೆಂಬ ವಾದ ಮಂದಿಟ್ಟಿದ್ದಾರೆ.

ತಮಗೇಕೆ ಸಿಎಂ ಸ್ಥಾನ ಕೊಡಬೇಕೆಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪ್ರತ್ಯೇಕ ವಾದ ಮುಂದಿಟ್ಟಿದ್ದಾರೆ. ತಾವೇನು ಮಾಡಿದ್ದೇವೆ, ಪಕ್ಷಕ್ಕೆ ಯಾವ ರೀತಿ ಅನುಕೂಲವಾಗಿದೆ, ಸರ್ಕಾರ ಬರಲು ತಮ್ಮದೇನು ಕೊಡುಗೆ ಇದೆ ಎಂದು ವಿವರವಾದ ವರದಿಯನ್ನು ಖರ್ಗೆಯವರ ಕೈಗಿಟ್ಟಿರುವುದು ವಿಶೇಷ.

- Advertisement -

Related news

error: Content is protected !!