
ಬೀದರ್ : ಹೈದರಾಬಾದ್‌ನಿಂದ ಮಹಾರಾಷ್ಟ್ರದ ಕಡೆಗೆ ಟಾಟಾ ಗೂಡ್ಸ್ ವಾಹನವೊಂದರಲ್ಲಿ 6 ಕೋಟಿ 50ಲಕ್ಷ ರೂ. ಮೌಲ್ಯದ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಗಾಂಜಾದೊಂದಿಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಗಾಂಜಾ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹುಮನಾಬಾದ ಉಪ ವಿಭಾಗದ ಸಿಪಿಐ ಮಾಡೋಳಪ್ಪ ಅವರ ನೇತೃತ್ವದ ಪೊಲೀಸರ ತಂಡ ಬೀದರ್ ರಾಷ್ಟ್ರೀಯ ಹೆದ್ದಾರಿ-65ರ ರಾಜೇಶ್ವರ ಗ್ರಾಮದ ಹೊರ ವಲಯದಲ್ಲಿ ದಾಳಿ ನಡೆಸಿದೆ. ಟಾಟಾ ಗೂಡ್ಸ್ ವಾಹನದಲ್ಲಿ ಗಾಂಜಾ ಇದ್ದ ಮೂಟೆಗಳನ್ನಿಟ್ಟು ಅದರ ಮೇಲೆ ಮೊಟ್ಟೆಗಳನ್ನು ಇಡಲಾಗಿತ್ತು. ದಾಳಿ ವೇಳೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ಟಾಟಾ ಗೂಡ್ಸ್ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಸುಮಾರು 6 ಕೋಟಿ 50 ಲಕ್ಷ ರೂ. ಮೌಲ್ಯದ 650 ಕೆಜಿ ತೂಕದ ಗಾಂಜಾ ದೊರಕಿದೆ. ಚಾಲಕನನ್ನು ವಿಚಾರಿಸಿದಾಗ ಹೈದರಾಬಾದ್‌ನಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.









