Thursday, October 29, 2026
spot_imgspot_img
spot_imgspot_img

ಪುತ್ತೂರು ಶಾಸಕರ ಕಚೇರಿಗೆ ಕರೆದು ಕೊಂಡು ಹೋಗುತ್ತೇನೆಂದು ಪುಸಲಾಯಿಸಿ ಯುವತಿಯ ಮಾನಭಂಗಕ್ಕೆ ಯತ್ನ- ಜಮೀನಿನ ದಾಖಲೆ ಸರಿಪಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ಆರೋಪಿ- ಆರೋಪಿ ಜಯರಾಮ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು..!

- Advertisement -
- Advertisement -

ಪುತ್ತೂರು: ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ನಂಬಿಸಿ ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಪುತ್ತೂರು, ಬಲ್ನಾಡು ನಿವಾಸಿ ಜಯರಾಮ ಎಂಬವರ ವಿರುದ್ಧ ದೂರು ನೀಡಲಾಗಿದೆ.

ಮಂಗಳೂರಿನ ವೆನ್‌ಲಾಕ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ, ಕಡಬದಿಂದ ಪ್ರತಿದಿನ ಮಂಗಳೂರಿಗೆ ಪ್ರಯಾಣಿಸಲು ಕಷ್ಟವಾಗುತ್ತಿದ್ದ ಕಾರಣ ಜೂನ್ ತಿಂಗಳಿನಿಂದ ಮಂಗಳೂರಿನ ಕೊಟ್ಟಾರಚೌಕಿಯಲ್ಲಿರುವ ತನ್ನ ಸಹಪಾಠಿ ಮಮತಾ ಅವರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸವಾಗಿದ್ದರು.ಈ ಸಂದರ್ಭದಲ್ಲಿ ಯುವತಿ ತನ್ನ ಮನೆಯ ಜಮೀನಿನ ದಾಖಲೆಗಳಲ್ಲಿ ಸಮಸ್ಯೆಯಿರುವ ಬಗ್ಗೆ ಮಮತಾ ಅವರಲ್ಲಿ ಹೇಳಿಕೊಂಡಿದ್ದರು.

ಮಮತಾ ಅವರ ಪತಿ ಜಯರಾಮ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ, ಆಗಸ್ಟ್ 17ರಂದು ಯುವತಿಯ ಮನೆಯ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಪುತ್ತೂರು ಶಾಸಕರ ಕಚೇರಿಗೆ ಕರೆದೊಯ್ದಿದ್ದರು. ಅಂದು ಶಾಸಕರು ಕಚೇರಿಯಲ್ಲಿ ಇಲ್ಲದ ಕಾರಣ ವಾಪಸ್ ಮಂಗಳೂರಿಗೆ ತೆರಳಿದ್ದರು.ನಂತರ ಆಗಸ್ಟ್ 23ರಂದು ಯುವತಿಗೆ ಕರೆ ಮಾಡಿದ ಜಯರಾಮ, ಮರುದಿನ ಪುತ್ತೂರಿಗೆ ಒಬ್ಬಳೇ ಬರುವಂತೆ ತಿಳಿಸಿ, ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ಹೇಳಿದ್ದರೆನ್ನಲಾಗಿದೆ. ಅದರಂತೆ ಆಗಸ್ಟ್ 24ರಂದು ಯುವತಿ ಪುತ್ತೂರಿಗೆ ಬಂದಿದ್ದು, ಶಾಸಕರ ಕಚೇರಿಯಲ್ಲಿ ಶಾಸಕರು ಇಲ್ಲದ ಕಾರಣ ಜಯರಾಮ ತನ್ನ ಸ್ಕೂಟಿಯಲ್ಲಿ ಪುತ್ತೂರು ಕಸಬಾ ಗ್ರಾಮದ ನೆಲ್ಲಿಗುಂಡಿಯಲ್ಲಿರುವ ತನ್ನ ಮನೆಗೆ ಕರೆದೊಯ್ದು, ಮನೆಯೊಳಗೆ ಯಾರೂ ಇಲ್ಲದ ಸಂದರ್ಭದಲ್ಲಿ ಯುವತಿಯನ್ನು ಒಳಗೆ ಕರೆದೊಯ್ದು ಬಾಗಿಲು ಲಾಕ್ ಮಾಡಿ, ಅಂಗಿಯ ಬಟನ್‌ಗಳನ್ನು ಬಿಚ್ಚಿಕೊಂಡು ಏಕಾಏಕಿ ಯುವತಿಯ ಸೊಂಟ ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಯುವತಿ ಜೋರಾಗಿ ಬೊಬ್ಬೆ ಹಾಕಿ ಬಾಗಿಲು ತೆರೆದು ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ ಎಂದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಜಯರಾಮ ಬೆದರಿಕೆ ಹಾಕಿದ್ದಾನೆ.

ಬಳಿಕವೂ ಮಂಗಳೂರಿನ ತನ್ನ ಮನೆಯಲ್ಲಿ ಪದೇಪದೇ ಕಿರುಕುಳ ನೀಡುತ್ತಾ ತನ್ನ ಬೇಡಿಕೆಗೆ ಒಪ್ಪುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.ಆರೋಪಿಯ ಬೆದರಿಕೆಗೆ ಹೆದರಿ ಹಾಗೂ ತನ್ನ ಮನೆಯವರಿಗೆ ತೊಂದರೆಯಾಗಬಹುದೆಂಬ ಭಯದಿಂದ ಯುವತಿ ಈವರೆಗೆ ದೂರು ನೀಡಿರಲಿಲ್ಲ. ಇದೀಗ ಮನೆಯವರಿಗೆ ವಿಷಯ ತಿಳಿಸಿ ದೂರು ನೀಡಿದ್ದು, ಆರೋಪಿ ಜಯರಾಮ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಭಾರತೀಯ ನೀತಿ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!